ಕನ್ನಡದ ಖ್ಯಾತ ಪೋಷಕ ಕಲಾವಿದ ಸದಾಶಿವ ಬ್ರಹ್ಮಾವರ ಯಾರಿಗೆ ತಾನೇ ಗೊತ್ತಿಲ್ಲ. ಕನ್ನಡದಲ್ಲಿ 150ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಹಿರಿಯ ನಟ ಸದಾಶಿವ ಬ್ರಹ್ಮಾವರ. ಆದರೆ ಸದಾಶಿವ ಬ್ರಹ್ಮಾವರ ಈಗ ಅನಾಥರಂತೆ ರಸ್ತೆಯಲ್ಲಿ ಅಲೆಯುತ್ತಿದ್ದಾರೆ. ಯಾಕೆ ಅಂತೀರಾ ಈ ವರದಿ ನೋಡಿ.
ಕಾರವಾರ(ಆ.16): ಸದಾಶಿವ ಬ್ರಹ್ಮಾವರ್, ಈ ಹೆಸರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕನ್ನಡದ ಖ್ಯಾತ ನಟರಾದ ಡಾ.ರಾಜ್ಕುಮಾರ್, ಸುದೀಪ್, ಜಗ್ಗೇಶ್ ಸೇರಿದಂತೆ ಹತ್ತಾರು ನಟರೊಂದಿಗೆ ಅಭಿನಯಿಸಿರೋ ಹಿರಿಯ ಪೋಷಕ ನಟ. ಪೋಷಕ ನಟನಾಗಿಯೂ, ಕೆಲ ಸಿನಿಮಾಗಳಲ್ಲಿ ಖಳನಾಯಕನಾಗಿಯೂ ಅಭಿನಯಿಸಿದ್ದಾರೆ. ಇಂಥಾ ಮಹಾನ್ ಕಲಾವಿದನ ನಟನೇ ಮತ್ತು ಜೀವನ ಶೈಲಿ ನೋಡಿದ ಸಾವಿರಾರು ಅಭಿಮಾನಿಗಳು ಇವರ ನಯ-ವಿನಯದಿಂದ ಸರಿದಾರಿಗೆ ಬಂದು ಜೀವನ ರೂಪಿಸಿಕೊಂಡಿರೋ ಉದಾಹರಣೆಗಳು ಸಾಕಷ್ಟಿವೆ.
ಆದರೆ ಈಗ ಅದೇ ನಟ ಯಾವುದೇ ನೆಲೆಯಿಲ್ಲದೆ ಕುಮಟಾ ರಸ್ತೆಗಳಲ್ಲಿ ಅಲೆದಾಡುತ್ತಾ ನೆಲೆಗಾಗಿ ಪರಿತಪಿಸುತ್ತಿದ್ದಾರೆ. ಹತ್ತಾರು ಮಂದಿಗೆ ಆಶ್ರಯ ನೀಡಿದ್ದ ಈ ಹಿರಿಯ ಕಲಾವಿದ ಬೀದಿಗೆ ಬಿದ್ದಿದ್ದಾರೆ. ಒಂದೊತ್ತಿನ ಊಟಕ್ಕೂ ಗತಿಯಿಲ್ಲದೇ ಕುಮಟಾ ರಸ್ತೆಯಲ್ಲಿ ಪರದಾಟ ನಡೆಸುತ್ತಿದ್ದಾರೆ. ಇದನ್ನ ಗಮನಿಸಿದ ಸ್ಥಳೀಯರು ಸದಾಶಿವ ಬ್ರಹ್ಮಾವರ್ ಅವರನ್ನು ಗುರುತಿಸಿ ಹೋಟೆಲ್'ಗೆ ಕರೆದುಕೊಂಡು ಹೋಗಿ ಊಟ ಕೊಡಿಸಿದ್ದಾರೆ.
ದೇಹ ನಿಯಂತ್ರಣ ಕಳೆದುಕೊಂಡು ಮುಪ್ಪಾಗಿರುವ ಸದಾಶಿವ ಬ್ರಹ್ಮಾವರ್. ಮಕ್ಕಳು ಇದ್ದರೂ ಅನಾಥರಂತೆ ಒಂದೊತ್ತಿನ ಊಟಕ್ಕೂ ಅಲೆಯುತ್ತಿದ್ದಾರೆ. ಆದರೂ ಕೂಡ ತಮ್ಮ ಸ್ವಾಭಿಮಾನ ಮಾತ್ರ ಬಿಟ್ಟು ಕೊಟ್ಟಿಲ್ಲ.
ಒಟ್ಟಿನಲ್ಲಿ ತೆರೆಯ ಮೇಲೆ ಸಾವಿರಾರು ಜನರಿಗೆ ಬುದ್ಧಿ ಮಾತು ಹೇಳಿದ ನಟ ಸದಾಶಿವ ಬ್ರಹ್ಮಾವರ್ ಬಾಳಿನಲ್ಲಿ ಈಗ ನೋವು ತುಂಬಿದೆ. ಹೀಗಾಗಿ ಈ ಹಿರಿಯ ಜೀವಿಯ ಸಹಾಯಕ್ಕೆ ಕಲಾವಿದರ ಸಂಘ, ಚಲನಚಿತ್ರ ವಾಣಿಜ್ಯ ಮಂಡಳಿ ಸಹಾಯಕ್ಕೆ ಧಾವಿಸಬೇಕಾಗಿದೆ.
