"..ದೇವಸ್ಥಾನಕ್ಕೆ ಒಬ್ಬೊಬ್ಬರೇ ಹೋಗ್ತಾ ಇರ್ತಾರೆ. ವಯಸ್ಸಾಯಿತು ನೀವು ಎಲ್ಲೂ ಹೋಗಬ್ಯಾಡ್ರೀ ಇಲ್ಲೇ ಇರ್ರೀ ಎಂದು ನಾವು ಹೇಳುತ್ತಾ ಇರ್ತೀವ್ರೀ. ಆದ್ರೆ ನಾನು ಒಂದ್ಕಡೆ ಸುಮ್ನೆ ಕೂರೋವನಲ್ಲ.. ತಿರುಗಾಡುತ್ತಾ ಇರುತ್ತೇನೆ ಎಂದು ಹಠ ಹಿಡಿಯುತ್ತಾ," ಎಂದು ಸದಾಶಿವ ಬ್ರಹ್ಮಾವರ ಅವರ ಸೊಸೆ ಪ್ರೀತಿ ಹೇಳುತ್ತಾರೆ.

ಬೆಂಗಳೂರು(ಆ. 16): ಕನ್ನಡ ಚಿತ್ರರಂಗದ ಹಿರಿಯ ನಟ ಸದಾಶಿವ್ ಬ್ರಹ್ಮಾವರ್ ಅವರು ಬೀದಿಗೆ ಬಂದಿದ್ದಾರೆ, ಅವರ ಕುಟುಂಬದವರು ಮನೆಯಿಂದ ಹೊರಹಾಕಿದ್ದಾರೆ ಎಂಬಿತ್ಯಾದಿ ಸುದ್ದಿಗಳು ಇಂದು ಸಾಕಷ್ಟು ಕೇಳಿಬಂದಿದೆ. ತಮಗೇನೂ ಆಗಿಲ್ಲ, ಚೆನ್ನಾಗಿದ್ದೀನಿ ಎಂದು ಬ್ರಹ್ಮಾವರ್ ಅವರೇ ಖುದ್ದಾಗಿ ಸುವರ್ಣನ್ಯೂಸ್'ಗೆ ಹೇಳಿಕೆ ಕೊಟ್ಟಿದ್ದಾರೆ. ಇದೇ ವಿಷಯವಾಗಿ ಸದಾಶಿವ್ ಬ್ರಹ್ಮಾವರ ಅವರ ಮಗ, ಸೊಸೆ ಮತ್ತು ಅಳಿಯ ಕೂಡ ಸುವರ್ಣನ್ಯೂಸ್ ಜೊತೆ ಮಾತನಾಡಿ ಸ್ಪಷ್ಟನೆ ನೀಡಿದ್ದಾರೆ.

"ಅಪ್ಪ ಆರ್ಥಿಕವಾಗಿ ಚೆನ್ನಾಗೇ ಇದ್ದಾರೆ. ಅವರು ಯಾರಾದರು ಸಿಕ್ಕರೆ ಬಹಳ ಫಿಲಾಸಫಿಕಲ್ ಆಗಿ ಮಾತನಾಡುತ್ತಾರೆ. ಹೀಗಾಗಿ, ಕೆಲವರಿಗೆ ಗೊಂದಲವಾಗಿ, ಇವರಿಗೆ ಏನೋ ಸಮಸ್ಯೆ ಇರಬಹುದು ಎಂಬ ಅನಿಸಿಕೆ ಬಂದಿರಬಹುದು," ಎಂದು ಪುತ್ರ ರವೀಂದ್ರ ಬ್ರಹ್ಮಾವರ ಹೇಳುತ್ತಾರೆ. ತಮ್ಮ ತಂದೆಯು ದೇವಸ್ಥಾನಕ್ಕೆ ಹೋಗುವುದಷ್ಟೇ ಅಲ್ಲ, ತಮ್ಮ ಜೇಬಿನಲ್ಲಿದ್ದ ಎಲ್ಲಾ ಹಣವನ್ನೂ ದೇವಸ್ಥಾನದ ಹುಂಡಿಗೇ ಹಾಕಿಬಿಡುತ್ತಾರೆ. ಬಳಿಕ ಜೇಬಿನಲ್ಲಿ ಹಣ ಖಾಲಿಯಾದಾಗ ವಾಪಸ್ ಬರಲು ಹಣವಿಲ್ಲದೇ ಒದ್ದಾಡುತ್ತಾರೆ ಎಂದೂ ರವೀಂದ್ರ ಬ್ರಹ್ಮಾವರ ವಿವರಿಸುತ್ತಾರೆ.

ಸೊಸೆ ಪ್ರೀತಿ ಕೂಡ ಪ್ರತಿಕ್ರಿಯೆ ನೀಡಿ, ತಮ್ಮ ಮಾವನವರು ಈ ಮನೆಯ ಯಜಮಾನರು. ನಮ್ಮಿಂದ ಅವರಿಗೆ ಯಾವುದೇ ತೊಂದರೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

"ನಮಗೆ ಅವರು ಬೇಕು. ಇಲ್ಲಿ ಅವರನ್ನು ಪ್ರೀತಿ ಮಾಡುವ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಇದ್ದಾರೆ. ಆದರೂ ಅವರು ಯಾಕೆ ಹಾಗೆ ಮಾಡಿದರೋ ಗೊತ್ತಿಲ್ಲ,..

"..ದೇವಸ್ಥಾನಕ್ಕೆ ಒಬ್ಬೊಬ್ಬರೇ ಹೋಗ್ತಾ ಇರ್ತಾರೆ. ವಯಸ್ಸಾಯಿತು ನೀವು ಎಲ್ಲೂ ಹೋಗಬ್ಯಾಡ್ರೀ ಇಲ್ಲೇ ಇರ್ರೀ ಎಂದು ನಾವು ಹೇಳುತ್ತಾ ಇರ್ತೀವ್ರೀ. ಆದ್ರೆ ನಾನು ಒಂದ್ಕಡೆ ಸುಮ್ನೆ ಕೂರೋವನಲ್ಲ.. ತಿರುಗಾಡುತ್ತಾ ಇರುತ್ತೇನೆ ಎಂದು ಹಠ ಹಿಡಿಯುತ್ತಾ," ಎಂದು ಸದಾಶಿವ ಬ್ರಹ್ಮಾವರ ಅವರ ಸೊಸೆ ಪ್ರೀತಿ ಹೇಳುತ್ತಾರೆ.

ಇನ್ನು, ಸದಾಶಿವ್ ಬ್ರಹ್ಮಾವರ ಅವರ ಅಳಿಯ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ತಮ್ಮಿಂದ ಮಾವನವರಿಗೆ ಯಾವುದೇ ತೊಂದರೆ ಆಗಿಲ್ಲ. ಇಲ್ಲಿ ಅವರು ಖುಷಿಖುಷಿಯಾಗೇ ಇದ್ದಾರೆ ಎಂದವರು ತಿಳಿಸುತ್ತಾರೆ.