ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಗೆ ಮುನ್ನ ಸಾಲ ಮನ್ನಾ ಮಾಡಿ ಜನರ ಮೂಗಿಗೆ ತುಪ್ಪ ಹಚ್ಚುತ್ತಿದ್ದಾರೆ. ಸಾಲ ಮನ್ನಾ ಕ್ರಮವು ಸ್ವಾಗತಾರ್ಹವಾದರೂ, ಮೊದಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕಿತ್ತು ಎಂದು ಆಗ್ರಹಿಸಿದರು.

ಬೆಂಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೀಚಕ ಇದ್ದಂತೆ. ಮುಂದಿನ ಚುನಾವಣೆಯಲ್ಲಿ ಅವರಿಗೆ ಜನರು ಮೈಸೂರು ದಾರಿ ತೋರಿಸಲಿದ್ದಾರೆ' ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಕಿಡಿಕಾರಿದ್ದಾರೆ. ತಮ್ಮ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಉದ್ಯೋಗ ಮೇಳ ಕಾರ್ಯಕ್ರಮದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಗೆ ಮುನ್ನ ಸಾಲ ಮನ್ನಾ ಮಾಡಿ ಜನರ ಮೂಗಿಗೆ ತುಪ್ಪ ಹಚ್ಚುತ್ತಿದ್ದಾರೆ. ಸಾಲ ಮನ್ನಾ ಕ್ರಮವು ಸ್ವಾಗತಾರ್ಹವಾದರೂ, ಮೊದಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕಿತ್ತು. ಸಾಲ ಮನ್ನಾ ಮಾಡುವ ಮುನ್ನವೇ ಕೆಲವು ರೈತರು ಸಾಲ ಪಾವತಿಸಿದ್ದಾರೆ. ಅವರಿಗೂ ಸಾಲ ಮನ್ನಾ ಮಾಡಿ ಹಣ ವಾಪಸ್‌ ನೀಡಬೇಕು ಎಂದು ಆಗ್ರಹಿಸಿದರು.

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಟೀಕಾಪ್ರಹಾರ ನಡೆಸಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಪ್ರಚಾರಕ್ಕಾಗಿ ದೊಡ್ಡ ದೊಡ್ಡ ಜಾಹೀರಾತು ನೀಡುತ್ತಿದೆ ಎಂಬ ಆರೋಪವನ್ನು ಟೀಕಿಸಿದರು. ಕುಮಾರಸ್ವಾಮಿ ಅವರಿಗೆ ಹಳದಿ ರೋಗ ಬಂದಿದೆ. ಹಳದಿ ರೋಗ ಇದ್ದವರಿಗೆ ಲೋಕವೆಲ್ಲಾ ಹಳದಿಯಾಗಿಯೇ ಕಾಣುತ್ತದೆ. ಜೆಡಿಎಸ್‌ ಕೇಂದ್ರದಲ್ಲಾಗಲಿ, ರಾಜ್ಯದಲ್ಲಾಗಲಿ, ಕಡೆಯ ಪಕ್ಷ ಪಾಲಿಕೆಯಲ್ಲಿಯೂ ಅಧಿಕಾರದಲ್ಲಿ ಇಲ್ಲ. ಹೀಗಾಗಿ ಅವರು ಮನಬಂದಂತೆ ಮಾತನಾಡುತ್ತಿದ್ದಾರೆ ಎಂದು ಹರಿಹಾಯ್ದರು.

ಕನ್ನಡಪ್ರಭ ವಾರ್ತೆ
epaper.kannadaprabha.in