Asianet Suvarna News Asianet Suvarna News

ಅಂಗನವಾಡಿ ಕಾರ್ಯಕರ್ತೆಯರ ದಾರುಣ ಸ್ಥಿತಿ: ಕಸದ ರಾಶಿಯಲ್ಲೇ ಊಟ, ನಿದ್ದೆ, ಜೋಗುಳ

ನನ್ನ ಪಾಪು ತೀವ್ರ ಜ್ವರದಿಂದ ಬಳಲುತ್ತಿದೆ, ಈಗಾಗಲೇ 2 ಬಾರಿ ಆ್ಯಂಬುಲೆನ್ಸ್‌ನಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ. ಏನೇ ಆದರೂ ಬೇಡಿಕೆ ಈಡೇರುವವರೆಗೂ ಇಲ್ಲಿಂದ ಕದಲುವುದಿಲ್ಲ.
- ನಾಜೀಯಾ ಬೇಗಂ, 6 ತಿಂಗಳ ಮಗುವಿನೊಂದಿಗೆ ಬಂದಿರುವ ಚಿಂಚೋಳಿ ನಿವಾಸಿ

sad state of anganwadi protesters at freedom park

ಬೆಂಗಳೂರು: ಹಾಸಿಕೊಳ್ಳಲು ಬಟ್ಟೆಯಿಲ್ಲ, ಹೊದ್ದುಕೊಳ್ಳಲು ರಗ್ಗಿಲ್ಲ. ರಕ್ತ ಹೀರುವ ಸೊಳ್ಳೆಗಳು ನಿದ್ರಿಸಲು ಬಿಡುತ್ತಿಲ್ಲ. ಬಿದ್ದ ಕಸದ ರಾಶಿಯ ಪಕ್ಕದಲ್ಲೇ ನಿದ್ರೆಗೆ ಜಾರಲಾಗದೆ ಅಳುವ ಕಂದಮ್ಮನಿಗೆ ಜೋಗುಳ...

ಫ್ರೀಡಂ ಪಾರ್ಕ್ ಮುಂಭಾಗದ ರಸ್ತೆಯಲ್ಲಿ 2ನೇ ರಾತ್ರಿಗೆ ಕಾಲಿಟ್ಟಅಂಗನವಾಡಿ ಕಾರ್ಯಕರ್ತೆಯರ ಅಹೋರಾತ್ರಿ ಪ್ರತಿಭಟನೆಯ ದೃಶ್ಯಗಳಿವು. ಅಪಾರ ಕಸ ಪ್ರತಿಭಟನಾ ನಿರತರಿಂದಲೇ ಉತ್ಪತ್ತಿಯಾಗುತ್ತಿದೆ. ಅದರ ನಡುವೆಯೇ ಕುಳಿತು ಊಟ ಮಾಡುವ ಪರಿಸ್ಥಿತಿ. ಅಲ್ಲಿಯೇ ಸ್ವಲ್ಪ ಜಾಗ ಮಾಡಿಕೊಂಡು ನಿದ್ರೆಗೆ ಜಾರುವ ಪರಿಸ್ಥಿತಿ ನಿರ್ಮಾಣವಾಗಿದೆ. ಸೊಳ್ಳೆಗಳ ಗುಂಯ್ ಗುಡುವ ಸದ್ದಿನಲ್ಲಿ ಮಲಗಿರುವ ದೃಶ್ಯಗಳು ನೋಡುಗರ ಮನ ಕಲಕುವಂತಿತ್ತು. 

ಬೇಡಿಕೆ ಈಡೇರಿಕೆಗಾಗಿ ಬೆಂಗಳೂರು ನಗರಕ್ಕೆ ಬಂದಿದ್ದು, ವಿಶಾಲವಾದ ರಸ್ತೆಯಲ್ಲಿ ಮಲಗಿರುವ ಕಾರ್ಯಕರ್ತರೆಯಲ್ಲಿ ಹೋರಾಟದ ಮೂಲಕವೇ ಬೇಡಿಕೆಗಳು ಈಡೇರಿಸಿಕೊಳ್ಳಬೇಕು ಎಂಬ ಆಶಾಭಾವನೆಯಿದ್ದರೂ, ಆರೋಗ್ಯ ಕೆಟ್ಟಲ್ಲಿ ಮುಂದೇನು ಎಂಬ ಅನುಮಾನ ಹಾಗೂ ಊರಿನಲ್ಲಿರುವ ಮನೆಯವರು ಹಾಗೂ ಮಕ್ಕಳ ಪರಿಸ್ಥಿತಿ ನೆನೆದು ಹಲಬುವವ ಸ್ಥಿತಿಯಲ್ಲೇ ನಿದ್ದೆ ಬಾರದೇ ಹಲವು ಅಂಗನವಾಡಿ ಕಾರ್ಯಕರ್ತೆ ಯರು ತೊಳಲಾಡುತ್ತಿರುವುದು ಕಂಡು ಬಂತು.

ಹೃದಯ ಸಂಬಂಧಿ ಕಾಯಿಲೆಯುಳ್ಳವರು, ಸಣ್ಣ ಮಕ್ಕಳೊಂದಿಗಿನ ಬಾಣಂತಿಯರು ಸೇರಿದಂತೆ ಗರ್ಭಿಣಿಯರು ಪ್ರತಿಭಟನೆಯಲ್ಲಿ ನಿರತರಾಗಿ ದ್ದರು. ರಕ್ತದೊತ್ತಡ, ಮಧುಮೇಹ, ಜ್ವರ ಸೇರಿ ದಂತೆ ವಿವಿಧ ಸಣ್ಣಪುಟ್ಟಕಾಯಿಲೆಗಳಿಗೆ ಒಳಗಾಗಿ ಸ್ಥಳದಲ್ಲಿಯೇ ನಿಲ್ಲಿಸಿದ್ದ 108 ಆ್ಯಂಬುಲೆನ್ಸ್‌'ನ ಲ್ಲಿಯೇ ಚಿಕಿತ್ಸೆ ಪಡೆಯಲು ಸಾಲುಗಟ್ಟಿನಿಂತಿ ದ್ದರು. ಪಾಲಿಕೆ ವತಿಯಿಂದ ಸುಮಾರು 10ಕ್ಕೂ ಹೆಚ್ಚು ಮೊಬೈಲ್‌ ಶೌಚಾಲಯಗಳ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಕೆಲ ಶೌಚಾಲಯಗಳಲ್ಲಿ ನೀರಿರಲಿಲ್ಲ. ನೀರಿದ್ದರೂ ಬಳಸುವುದಕ್ಕೆ ಬಾರದೇ ಪರದಾಡುತ್ತಿದ್ದರು. ಏಕೆಂದರೆ, ಇಂತಹ ಶೌಚಾಲಯಗಳನ್ನು ಬಳಸುವುದು ಹೇಗೆ ಎಂಬ ಮಾಹಿತಿಯೇ ಗ್ರಾಮೀಣ ಭಾಗದಿಂದ ಬಂದ ಹೋರಾಟಗಾರ್ತಿಯರಿಗೆ ತಿಳಿದಿರಲಿಲ್ಲ. ಪರದಾಡುತ್ತಿದ್ದ ಅವರಿಗೆ ಇತರರು ಶೌಚಾಲಯ ಬಳಸುವುದು ಹೇಗೆ ಎಂಬುದನ್ನು ತಿಳಿಸಿಕೊಡುವ ಪ್ರಯತ್ನ ಮಾಡುತ್ತಿದ್ದರು.

ಹೋರಾಟಗಾರ್ತಿಯರೂ ಕಸದ ನಡುವೆಯೇ ಮಲಗಿರುವ ದೃಶ್ಯಗಳು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆಯೇ ಎಚ್ಚೆತ್ತ ಬಿಬಿಎಂಪಿಯು ತಡ ರಾತ್ರಿ ಪೌರಕಾರ್ಮಿಕರನ್ನು ಸ್ಥಳಕ್ಕೆ ಕಳುಹಿಸಿ ಒಂದಷ್ಟು ಕಸ ಸಾಗಿಸಿತು. 

ಹೋರಾಟಕ್ಕೆ ಮಿಡಿಯದ ಬೆಂಗಳೂರು ಜನ
ಎಲ್ಲೋ ದೂರದ ಚೆನ್ನೈನಲ್ಲಿ ಪ್ರಾಕೃತಿಕ ವಿಪತ್ತು ಸಂಬಂಧಿ​ಸಿದರೆ ಭರಪೂರ ನೆರವು ನೀಡಲು ಮುಂದಾ​ಗುವ, ಇನ್ಯಾವುದೋ ರಾಜ್ಯದಲ್ಲಿ ಆಪತ್ತು ಉಂಟಾದರೆ, ಅದಕ್ಕಾಗಿ ಮರುಗುವ ಬೆಂಗಳೂರಿನ ನಿವಾಸಿಗಳು ತಮ್ಮ ನ್ಯಾಯಯುತ ಬೇಡಿಕೆ ಈಡೇರಿಕೆ​ಗಾಗಿ ಒತ್ತಾಯಿಸಲು ರಾಜ್ಯದ ಎಲ್ಲೆಡೆ​ಯಿಂದ ಬಂದು ರಸ್ತೆ ಪುಟ್ಟಕಂದಮ್ಮ​ಗಳೊಂದಿಗೆ ಮಲಗಿದ ಅಂಗನವಾಡಿ ಕಾರ್ಯಕರ್ತರ ಆಹೋ​​ರಾತ್ರಿ ಹೋರಾ​ಟಕ್ಕೆ ಸ್ಪಂದಿಸಿಲ್ಲ. ಅಷ್ಟೇ ಅಲ್ಲ, ಈ ಪ್ರತಿ​ಭಟನೆ​ಯಿಂದ ಉಂಟಾದ ಸಂಚಾರ ದಟ್ಟಣೆಗೆ ಪ್ರತಿಭಟನಾಕಾರರೇ ಕಾರಣ ಎಂದು ಶಪಿಸಿದ್ದು ಕಂಡುಬಂತು.

ರಾಜ್ಯದ ನಾನಾ ಭಾಗಗಳಿಂದ ಬೆಂಗಳೂರಿಗೆ ಬಂದಿರುವ ಸಾವಿರಾರು ಮಹಿಳೆಯರು ಸೋಮ​ವಾರ​ದಿಂದ ನಗರದ ಶೇಷಾದ್ರಿ ರಸ್ತೆಯಲ್ಲಿಯೇ ನೆಲೆ​ಯೂರಿದ್ದಾರೆ. ರಾತ್ರಿ ಹಗಲು ಎನ್ನದೆ ಸೊಳ್ಳೆ​ಗಳೊಂದಿಗೆ ಜೀವನ ನಡೆಸುತ್ತಿದ್ದಾರೆ. ತಮ್ಮ ಸಣ್ಣ ಮಕ್ಕಳೊಂದಿಗೆ ಮುಷ್ಕರಕ್ಕೆ ಮುಂದಾಗಿದ್ದಾರೆ. ಪ್ರತಿಭಟನಾ​ಕಾರರಿಗೆ ಶುದ್ಧ ಕುಡಿಯುವ ನೀರು ಮತ್ತು ಸೂಕ್ತ ಶೌಚಾಲಯ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದಾರೆ. ಆದರೆ, ಬೆಂಗಳೂರಿನಲ್ಲಿನ ಸಣ್ಣಪುಟ್ಟಸಮಸ್ಯೆಗಳಿಗೂ ದೊಡ್ಡ ಮಟ್ಟದಲ್ಲಿ ನೆರವು ನೀಡುವ ನಗರದ ಸಂಘ-ಸಂಸ್ಥೆಗಳು ಇವರ ನೋವಿಗೆ ಸ್ಪಂದಿಸಲಿಲ್ಲ. ನಮ್ಮ ನ್ಯಾಯಯುತ ಬೇಡಿಕೆ ಈಡೇರಿಸಿಕೊಳ್ಳಲು ಕಲಬುರಗಿಯಿಂದ ಬಂದಿದ್ದೇವೆ. ಊರಿನಲ್ಲಿ ಮನೆಯವರು ಮತ್ತು ಮಕ್ಕಳಿಗೆ ಊಟವಿಲ್ಲದಂತಾಗಿದೆ. ಆದರೆ, ಸರ್ಕಾರ ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಪ್ರತಿಭಟನೆಗೆ ಬೆಂಗಳೂರು ನಗರ ವಾಸಿಗಳು ಬೆಂಬಲ ಸೂಚಿಸಲಿದ್ದಾರೆ ಎಂದು ಭಾವಿಸಿದ್ದೇವು. ಆದರೆ, ನಮ್ಮನ್ನ ಕ್ಯಾರೇ ಎನ್ನುವವರೇ ಇಲ್ಲ. ಆದರೆ, ಸಂಚಾರ ದಟ್ಟಣೆಗೆ ಕಾರಣರಾಗುತ್ತಿದ್ದಾರೆ ಎಂದು ನಮ್ಮ ವಿರುದ್ಧ ಶಾಪ ಹಾಕುತ್ತಿದ್ದಾರೆ. ಇಂತಹ ಜನರನ್ನು ನಾವು ಎಲ್ಲಿಯೂ ನೋಡಿಲ್ಲ. ಒಂದು ಮನುಷ್ಯನ ಕಷ್ಟಕ್ಕೆ ಮತ್ತೊಬ್ಬ ಮನುಷ್ಯ ಸ್ಪಂದಿಸದಿದ್ದರೆ ಮನುಷ್ಯತ್ವಕ್ಕೆ ಅರ್ಥವಿದೆಯೇ ಎಂದು ಹಲವು ಪ್ರತಿಭಟನಾನಿರತರು ಪ್ರಶ್ನಿಸಿದರು.

ಪ್ರತಿಭಟನೆಯಿಂದಾಗಿ ಸೋಮವಾರ ಇಡೀ ಬೆಂಗಳೂರು ನಗರವೇ ಸ್ತಬ್ಧವಾಗಿತ್ತು. ಘಟನೆಗೆ ಸಂಬಂ​ಧಿಸಿದಂತೆ ಎಲ್ಲಾ ಮಾಧ್ಯಮಗಳಲ್ಲಿಯೂ ಸುದ್ದಿಯಾಗಿತ್ತು. ಆದರೆ, ಈ ಬಗ್ಗೆ ಅರಿವೇ ಇಲ್ಲದಂತೆ ಜನ ವರ್ತಿಸುತಿದ್ದಾರೆ. ಅಲ್ಲದೆ, ತಮ್ಮ ಕರ್ತವ್ಯಗಳಿಗೆ ಯಾವುದೇ ರೀತಿಯ ಗೊಂ​ದಲ​​ವಿಲ್ಲದಂತೆ ಅನುವು ಮಾಡಿಕೊಳ್ಳುತ್ತಿದ್ದಾರೆ. ಇಷ್ಟೊಂದು ಜನ ಏಕೆ ಬಂದಿದ್ದೀರಿ ಎಂದು ಒಬ್ಬರೂ ಪ್ರಶ್ನಿಸಿಲ್ಲ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ
epaper.kannadaprabha.in

Follow Us:
Download App:
  • android
  • ios