ತ್ರಿವಳಿ ತಲಾಖ್ ತೀರ್ಪನ್ನು ಸ್ವಾಗತಿಸಿದ ಹಿಂದೂಗಳು ಈಗ ಬೀದಿಗಿಳಿದಿದ್ದಾರೆ! ಇದು ಹಿಂದೂ ಪುನರುತ್ಥಾನ ಹಾಗೂ ಮೌಢ್ಯದ ವಿರುದ್ಧದ ಹೋರಾಟ ಜಾತಿ ಹುಟ್ಟಿನಿಂದ ಬರುತ್ತದೆ ಎಂದು ಎಲ್ಲಿ ಬರೆಯಲಾಗಿದೆ?
ನವದೆಹಲಿ: ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕವೂ ಶಬರಿಮಲೆ ದೇಗುಲಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರಿಗೆ ಪ್ರವೇಶ ನೀಡುವ ವಿಚಾರವಾಗಿ ಉಂಟಾಗಿರುವ ವಿವಾದಕ್ಕೆ ಪ್ರತಿಕ್ರಿಯಿಸರುವ ಕಟ್ಟಾ ಹಿಂದುತ್ವವಾದಿ, ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ, ಶಾಸ್ತ್ರಗಳನ್ನು ತಿದ್ದುಪಡಿ ಮಾಡಬಹುದೆಂದು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಒಂದು ತೀರ್ಪು ನೀಡಿದೆ. ನೀವೀಗ ಸಂಪ್ರಾದಾಯವೆಂದು ರಾಗ ಎಳೆಯುತ್ತಿದ್ದೀರಿ. ಆ ರೀತಿ ನೋಡುವುದಾದರೆ ಮುಸ್ಲಿಮರ ತ್ರಿವಳಿ ತಲಾಖ್ ಕೂಡಾ ಒಂದು ಸಂಪ್ರದಾಯವೇ. ಅದನ್ನು ಅಸಿಂಧುಗೊಳಿಸಿದಾಗ ಅದನ್ನು ಸ್ವಾಗತಿಸಿದ ಹಿಂದೂಗಳೇ ಈಗ ಬೀದಿಗಿಳಿದಿದ್ದಾರೆ, ಎಂದು ಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುಂದುವರಿದು, ಇದು ಹಿಂದೂ ಪುನರುತ್ಥಾನ ಹಾಗೂ ಮೌಢ್ಯದ ವಿರುದ್ಧದ ಹೋರಾಟ. ಎಲ್ಲಾ ಹಿಂದೂಗಳು ಸಮಾನರು, ಜಾತಿ ಪದ್ಧತಿ ತೊಲಗಬೇಕೆಂಬುವುದು ಪುನರುತ್ಥಾನದ ಬೇಡಿಕೆ. ಇಂದು ಬ್ರಾಹ್ಮಣರು ಮಾತ್ರ ಬುದ್ಧಿವಂತರಲ್ಲ. ಇತರರು ಎಲ್ಲಾ ರಂಗಗಳಲ್ಲಿದ್ದಾರೆ. ಜಾತಿ ಹುಟ್ಟಿನಿಂದ ಬರುತ್ತದೆ ಎಂದು ಎಲ್ಲಿ ಬರೆಯಲಾಗಿದೆ? ಶಾಸ್ತ್ರಗಳಿಗೆ ತಿದ್ದುಪಡಿ ಮಾಡಬಹುದಾಗಿದೆ, ಎಂದು ಅವರು ಹೇಳಿದ್ದಾರೆ.
ಶಬರಿಮಲೆಗೆ ಎಲ್ಲಾ ವಯಸ್ಸಿನ ಮಹಿಳೆಯರು ಪ್ರವೇಶಿಸಬಹುದೆಂದು ಕಳೆದ ಸಪ್ಟೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು, ಇದೀಗ ಬಿಜೆಪಿ ಸೇರಿದಂತೆ, ಹಿಂದೂ ಸಂಘಟನೆಗಳಿಂದ ಭಾರಿ ವಿರೋಧ ವ್ಯಕ್ತವಾಗಿದೆ.
ಸುಪ್ರೀಂ ತೀರ್ಪಿನ ಬಳಿಕ ಇದೇ ಮೊದಲ ಬಾರಿ ಬುಧವಾರದಂದು ಶಬರಿಮಲೆ ದೇಗುಲದ ಬಾಗಿಲು ಭಕ್ತರಿಗಾಗಿ ತೆರೆಯಲಾಗಿದ್ದು, ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
