ತಿರುವನಂತಪುರ[ಜೂ.27]: ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿಗೆ, ಶಬರಿಮಲೆಗೆ ಮಹಿಳೆಯರ ಪ್ರವೇಶವೇ ಕಾರಣ ಎಂದು ಸಿಪಿಎಂ ಒಪ್ಪಿಕೊಂಡಿದೆ. ಲೋಕಸಭಾ ಸೋಲಿನ ಕುರಿತ ಸಿದ್ಧಪಡಿಸಲಾದ ವರದಿಯಲ್ಲಿ ಈ ಅಂಶವನ್ನು ಸಿಪಿಎಂ ಒಪ್ಪಿಕೊಂಡಿದೆ.

ಕಳೆದ ಭಾನುವಾರ ಮತ್ತು ಸೋಮವಾರ ಇಲ್ಲಿ ಸಿಪಿಎಂ ರಾಜ್ಯ ಘಟಕದ ಆತ್ಮಾವಲೋಕನಾ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸಲಾಗಿದ್ದು, ಸಭೆಯ ಪ್ರಮುಖ ಅಂಶಗಳನ್ನು ಪಕ್ಷದ ಮುಖವಾಣಿ ದೇಶಾಭಿಮಾನಿಯಲ್ಲಿ ಪ್ರಕಟಿಸಲಾಗಿದೆ. ಶಬರಿಮಲೆಗೆ ಮಹಿಳೆಯರ ಪ್ರವೇಶವನ್ನು ರಾಜ್ಯದಲ್ಲಿನ ಆಢಳಿತಾರೂಢ ಸಿಪಿಎಂ ಬೆಂಬಲಿಸಿತ್ತು. ಜೊತೆಗೆ ಮಹಿಳೆಯರ ಪ್ರವೇಶಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್‌ ಮಾಡಿದ್ದ ಪ್ರತಿಭಟನೆ ವಿರೋಧಿಸಿ ಕೇರಳದಾದ್ಯಂತ ಜ.1ಕ್ಕೆ ಮಾನವ ಸರಪಳಿ ರಚಿಸಿತ್ತು.

ಅದಾದ ಬೆನ್ನಲ್ಲೇ ಇಬ್ಬರು ಮಹಿಳೆಯರು ರಾಜ್ಯ ಸರ್ಕಾರದ ಪೊಲೀಸರ ನೆರವಿನೊಂದಿಗೆ ದೇಗುಲ ಪ್ರವೇಶಿದ್ದರು. ಈ ವಿಷಯವನ್ನು ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್‌ ಪ್ರಮುಖವಾಗಿ ಬಿಂಬಿಸಿದ್ದವು. ಇದೇ ಸೋಲಿಗೆ ಕಾರಣವಾಯ್ತು ಎಂದು ಪಕ್ಷದ ಆಂತರಿಕ ವರದಿಯಲ್ಲಿ ಹೇಳಲಾಗಿದೆ. ರಾಜ್ಯದ 20 ಲೋಕಸಭಾ ಸ್ಥಾನಗಳ ಪೈಕಿ ಸಿಪಿಎ ನೇತೃತ್ವದ ಎಲ್‌ಡಿಎಫ್‌ ಕೇವಲ 1 ಸ್ಥಾನ ಗೆದ್ದಿತ್ತು. ಯುಡಿಎಫ್‌ 19 ಸ್ಥಾನ ಗೆದ್ದುಕೊಂಡಿತ್ತು.