ಈ ಬಾರಿ ಶಬರಿಮಲೆಗೆ 50 ವರ್ಷ ಒಳಗಿನ ಸ್ತ್ರೀಯರ ಪ್ರವೇಶಕ್ಕೆ ಸುಪ್ರಿಂಕೋರ್ಟ್ ಅನುಮತಿ ನೀಡಿದೆ. ಆದರೆ ದೇಗುಲಕ್ಕೆ ಈ ಬಾರಿ ಭೇಟಿ ನೀಡುವ ಭಕ್ತರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ.
ಶಬರಿಮಲೆ : ಋುತುಮತಿ ಸ್ತ್ರೀಯರ ಪ್ರವೇಶಕ್ಕೆ ಸರ್ವೋಚ್ಚ ನ್ಯಾಯಾಲಯ ಅವಕಾಶ ನೀಡಿದ ನಂತರ ಅಗ್ನಿಕುಂಡದಂತಾಗಿರುವ ಕೇರಳದ ಪ್ರಸಿದ್ಧ ಕ್ಷೇತ್ರ ಶಬರಿಮಲೆಗೆ ಹೋಗಲು ಭಕ್ತರು ಹಿಂದೇಟು ಹಾಕುತ್ತಿರುವುದು ಕಂಡುಬಂದಿದೆ.
ದೇವಾಲಯವು ವಾರ್ಷಿಕ ಯಾತ್ರೆಗೆ ಇತ್ತೀಚೆಗಷ್ಟೇ ತೆರೆದಿದ್ದು, ಮೊದಲ ವಾರ ಕೇವಲ 1.42 ಲಕ್ಷ ಭಕ್ತರು ಭೇಟಿ ನೀಡಿದ್ದಾರೆ. ಕಳೆದ ವರ್ಷ ಮೊದಲ ವಾರದಲ್ಲಿ 5 ಲಕ್ಷ ಭಕ್ತರು ಭೇಟಿ ನೀಡಿದ್ದರು.
ಭಕ್ತರ ಸಂಖ್ಯೆ ಕುಸಿತದಿಂದ ದೇವಾಲಯಕ್ಕೆ ಬರುವ ಈ ಭಕ್ತರನ್ನೇ ನಂಬಿದ್ದ ಸುತ್ತಮುತ್ತಲಿನ ವ್ಯಾಪಾರಿಗಳಿಗೂ ಕೂಡ ಆತಂಕ ಶುರುವಾಗಿದೆ. ಅಪ್ಪಂ ಮತ್ತು ಅರವಣ ಪ್ರಸಾದದ ಮಾರಾಟ ಇಳಿಕೆಯಾಗಿದ್ದು, ಹೀಗಾಗಿ ದೇವಾಲಯದ ಆಡಳಿತ ಮಂಡಳಿಯು ಪ್ರಸಾದ ಉತ್ಪಾದನೆಯನ್ನು ಕಡಿತಗೊಳಿಸಿದೆ.
ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ಮೇಲ್ಸೇತುವೆಯನ್ನು ಗಮನಿಸಿದಾಗ ಜನರ ಕೊರತೆಯಿಂದ ಭಣಗುಡುತ್ತಿರುವುದು ಕಂಡುಬರುತ್ತಿದೆ. ಕಳೆದ ವರ್ಷ ಇದು ಕಾಲಿಡಲೂ ಸಾಧ್ಯವಾಗದಷ್ಟುಗಿಜಿಗಿಡುತ್ತಿತ್ತು.
ಶಬರಿಮಲೆಗೆ ಮಹಿಳೆಯರ ಪ್ರವೇಶ ವಿರೋಧಿಸಿ ಕಳೆದ 1-2 ತಿಂಗಳಿಂದ ಶ್ರೀಕ್ಷೇತ್ರದಲ್ಲಿ ಪದೇ ಪದೇ ಗಲಾಟೆಗಳು ನಡೆಯುತ್ತಿವೆ. ಇದೇ ವೇಳೆ, ದೇವಾಲಯದ ಆವರಣದಲ್ಲಿ ರಾತ್ರಿ ತಂಗಲು ಭಕ್ತರಿಗೆ ಅವಕಾಶವಿಲ್ಲ. ಪೊಲೀಸರು ಭಾರೀ ನಿರ್ಬಂಧಗಳನ್ನು ವಿಧಿಸುತ್ತಿದ್ದಾರೆ. ಪೊಲೀಸರ ನಡೆಯನ್ನು ಪ್ರಶ್ನಿಸಿದ ಕೆಲವು ಭಕ್ತರನ್ನು ಬಂಧಿಸಲಾಗಿದೆ ಎಂಬುದು ಕೂಡ ಭಕ್ತರ ಸಂಖ್ಯೆಯ ಇಳಿಕೆಗೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಅನುಕೂಲವೂ ಆಗಿದೆ: ಭಕ್ತರ ಸಂಖ್ಯೆ ಇಳಿಮುಖ ಆಗಿದ್ದರೂ, ಈಗಾಗಲೇ ಭೇಟಿ ನೀಡಿದ ಭಕ್ತರಿಗೆ ಇದರಿಂದ ಅನುಕೂಲವೂ ಆಗಿದೆ. ‘5ನೇ ಸಲ ನಾನು ಶಬರಿಮಲೆಗೆ ಆಗಮಿಸುತ್ತಿದ್ದೇನೆ. ಪ್ರತಿ ಸಲ ಭಾರಿ ರಶ್ ಇರುತ್ತಿದ್ದ ಕಾರಣ 18 ಮೆಟ್ಟಿಲು ಹತ್ತಿ ದರ್ಶನ ಪಡೆಯುವುದು ಪ್ರಯಾಸಕರವಾಗಿತ್ತು. ದೇವರ ಎದುರು ಒಂದು ಕ್ಷಣವೂ ನಿಲ್ಲಲು ಬಿಡುತ್ತಿರಲಿಲ್ಲ. ಆದರೆ ಈ ಸಲ ನಾನು ಪ್ರತಿ ಮೆಟ್ಟಿಲನ್ನೂ ಮುಟ್ಟಿ ನಮಸ್ಕರಿಸುತ್ತ, ನಿಧಾನವಾಗಿ ಮೆಟ್ಟಿಲು ಹತ್ತುತ್ತ ದೇವರ ಎದುರು ಹಲವಾರು ಹೊತ್ತು ನಿಂತು ಪ್ರಾರ್ಥಿಸಿದೆ’ ಎಂದು ಭಕ್ತಾದಿಯೊಬ್ಬರು ಹೇಳಿದರು.
