ಸೋಮವಾರದಿಂದ ಶಬರಿಮಲೆ ದೇಗುಲವನ್ನು ಅಯ್ಯಪ್ಪ ಭಕ್ತರ ದರ್ಶನಕ್ಕಾಗಿ ತೆರೆಯಲಾಗಿದ್ದು ಇದೀಗ ಮತ್ತೆ ಮಹಿಳಾ ಪ್ರವೇಶದ ವಿಚಾರ ಸದ್ದು ಮಾಡುತ್ತಿದೆ. ಈ ನಿಟ್ಟಿನಲ್ಲಿ ಇತಿಹಾಸವೊಂದು ಸೃಷ್ಟಿಯಾಗುವ ಸಾಧ್ಯತೆ ಇದೆ.
ಶಬರಿಮಲೆ: ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅನುಮತಿ ಸಿಕ್ಕ ಬಳಿ ಸಂಘರ್ಷದ ತಾಣವಾಗಿರುವ ಶಬರಿಮಲೆ, ಸೋಮವಾರ ಮತ್ತೆ ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಗಿದೆ. ಮಾಸಿಕ ಪೂಜೆಗಾಗಿ ಸೋಮವಾರ ಸಂಜೆ ದೇಗುಲದ ಬಾಗಿಲು ತೆರೆದ ಬೆನ್ನಲ್ಲೇ, 26 ವರ್ಷ ವಯಸ್ಸಿನ ಅಂಜು ಎಂಬ ಮಹಿಳೆಯೊಬ್ಬರು ತಮ್ಮ ದೇಗುಲ ಪ್ರವೇಶಕ್ಕೆ ಭದ್ರತೆ ಒದಗಿಸಬೇಕೆಂದು ಕೋರಿ ಪಂಪಾದಲ್ಲಿ ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ.
ಈ ಸುದ್ದಿ ತಿಳಿಯುತ್ತಲೇ ಸಾವಿರಾರು ಸಂಖ್ಯೆಯಲ್ಲಿ ಅಯ್ಯಪ್ಪ ಭಕ್ತರು ಪಂಪಾದಲ್ಲಿನ ಪೊಲೀಸ್ ಠಾಣೆಯ ಎದುರು ಸ್ವಾಮಿಯೇ ಶರಣಂ ಅಯ್ಯಪ್ಪ ಎಂದು ಮಂತ್ರ ಘೋಷಿಸುತ್ತಾ, ಮಹಿಳೆಯ ಪ್ರವೇಶಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸದ್ಯ ಪಂಪಾದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಶಬರಿಮಲೆ ದೇಗುಲಕ್ಕೆ ಯಾವುದೇ ವ್ಯಕ್ತಿ, ಇನ್ಯಾವುದೇ ವ್ಯಕ್ತಿ ಅಡ್ಡಿ ಉಂಟು ಮಾಡಬಾರದು ಎಂದು ಕೇರಳ ಹೈಕೋರ್ಟ್ ಸೋಮವಾರ ಆದೇಶ ಹೊರಡಿಸಿದ ಬೆನ್ನಲ್ಲೇ, ಈ ಘಟನೆ ನಡೆದಿದೆ.
ಹೀಗಾಗಿ ಮಂಗಳವಾರ ಅಂಜು ದೇಗುಲ ಪ್ರವೇಶಿಸಲು ಯತ್ನಿಸಿದರೆ, ಪೊಲೀಸರು ಭದ್ರತೆ ಕೊಡಬೇಕಾದ ಅನಿವಾರ್ಯತೆ ಎದುರಾಗಲಿದೆ. ಹೀಗಾದಲ್ಲಿ ಭಕ್ತರು ಆಕೆಗೆ ಅಡ್ಡಿ ಮಾಡುವ ಸಾಧ್ಯತೆ ಇದೆ. ಮತ್ತೊಂದೆಡೆ ಯಾವುದೇ ಮಹಿಳೆ ದೇಗುಲ ಪ್ರವೇಶ ಯತ್ನ ಮಾಡಿದರೆ, ದೇಗುಲದ ಬಾಗಿಲು ಹಾಕುವುದಾಗಿ ದೇಗುಲದ ಅರ್ಚಕರು ಈಗಾಗಲೇ ಘೋಷಿಸಿದ್ದಾರೆ. ಹೀಗಾಗಿ ಮಂಗಳವಾರ ಶಬರಿಮಲೆ ಮತ್ತೊಂದು ಹೈಡ್ರಾಮಾಕ್ಕೆ ಸಾಕ್ಷಿಯಾಗುವ ನಿರೀಕ್ಷೆ ಇದೆ.
ಭದ್ರತೆ ಕೋರಿಕೆ: ಕೇರಳದ ಆಲಪ್ಪುಳ ಜಿಲ್ಲೆಯ ಚೆರಿಥಾಲಾದ ಅಂಜು ಎಂಬ ಮಹಿಳೆಯೊಬ್ಬರು, ಸೋಮವಾರ ಸಂಜೆ ಪಂಪಾದಲ್ಲಿನ ಪೊಲೀಸ್ ಠಾಣೆಗೆ ಆಗಮಿಸಿ, ತಾವು ದೇಗುಲ ಏರಲು ನಿರ್ಧರಿಸಿದ್ದು, ತಮಗೆ ಭದ್ರತೆ ಕೊಡುವಂತೆ ಕೋರಿದ್ದಾರೆ. ಇಬ್ಬರು ಮಕ್ಕಳು ಮತ್ತು ಪತಿ ಅಭಿಲಾಷ್ ಜೊತೆಗೆ ಆಗಮಿಸಿ ಮಹಿಳೆ, ದೇವರ ದರ್ಶನಕ್ಕೆ ಪೊಲೀಸರ ನೆರವು ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿಯವರೆಗೂ ಆಕೆಯ ಜೊತೆ ಪೊಲೀಸರು ಮಾತುಕತೆ ನಡೆಸಿದ್ದಾರೆ. ಮತ್ತೊಂದೆಡೆ ಭಕ್ತರು ಮಹಿಳೆಯ ಪ್ರವೇಶ ವಿರೋಧಿಸಿ ಠಾಣೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾಗಿ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.
ಭಾರೀ ಭದ್ರತೆ: ದೇಗುಲಕ್ಕೆ 10-50ರ ವಯೋಮಾನದ ಮಹಿಳೆಯರು ಪ್ರವೇಶಿಸಬಹುದು, ಇದಕ್ಕೆ ಭಕ್ತರು ವಿರೋಧಿಸಬಹುದು ಎಂಬ ಕಾರಣದಿಂದಾಗಿ, ಶನಿವಾರ ಸಂಜೆಯಿಂದಲೇ ಜಾರಿಗೆ ಬರುವಂತೆ ಮಂಗಳವಾರ ರಾತ್ರಿಯವರೆಗೆ ಶಬರಿಮಲೆ ಸನ್ನಿಧಾನ ಹಾಗೂ ಅದರ ಸುತ್ತಮುತ್ತಲಿನ ಪ್ರವೇಶ ಬಿಂದುಗಳಾದ ಪಂಪಾ, ನೀಲಕ್ಕಲ್ ಹಾಗೂ ಇಳುವಂಗಲ್‌ನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಜೊತೆಗೆ 2300ಕ್ಕೂ ಹೆಚ್ಚು ಪೊಲೀಸರನ್ನು ಕಾವಲಿಗೆ ಹಾಕಲಾಗಿತ್ತು.
