ಕೇಂದ್ರವು ಉದ್ದೇಶಿಸಿರುವ ‘ಹಣಕಾಸು ಗೊತ್ತುವಳಿ ಹಾಗೂ ಠೇವಣಿ ವಿಮೆ (ಎಫ್’ಆರ್‌ಡಿಐ) ಮಸೂದೆ-2017’ ಕುರಿತು ಬಿಜೆಪಿ ಮಿತ್ರಪಕ್ಷ ಶಿವಸೇನೆಯು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದೆ.

ಮುಂಬೈ: ಕೇಂದ್ರವು ಉದ್ದೇಶಿಸಿರುವ ‘ಹಣಕಾಸು ಗೊತ್ತುವಳಿ ಹಾಗೂ ಠೇವಣಿ ವಿಮೆ (ಎಫ್’ಆರ್‌ಡಿಐ) ಮಸೂದೆ-2017’ ಕುರಿತು ಬಿಜೆಪಿ ಮಿತ್ರಪಕ್ಷ ಶಿವಸೇನೆಯು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದೆ.

ಆ ಮಸೂದೆಯ ಮೂಲಕ ಕೇಂದ್ರವು ಜನಸಾಮನ್ಯರನ್ನು ಲೂಟಿ ಮಾಡಲು ಹೊರಟಿದೆಯೆಂದು ಶಿವಸೇನೆಯು ತನ್ನ ಮುಖವಾಣಿ ಸಾಮ್ನಾದಲ್ಲಿ ಬರೆದುಕೊಂಡಿದೆ.

ಈ ಮಸೂದೆಯ ಮೂಲಕ ದಿವಾಳಿಯಾದ ಬ್ಯಾಂಕುಗಳಿಗೆ ಜನರ ಹಣವನ್ನು ಬಳಸಲು ಅಧಿಕಾರ ನೀಡಲಾಗಿದೆ. ಆದುದರಿಂದ ಜನರು ಆತಂಕಗೊಂಡಿದ್ದಾರೆ ಎಂದು ಶಿವಸೇನೆಯು ಹೇಳಿದೆ.

ಬ್ಯಾಂಕ್‌ಗಳು ದಿವಾಳಿಯಾದಲ್ಲಿ ಠೇವಣಿದಾರರ ಹಿತ ಕಾಯುವ ‘ಠೇವಣಿ ವಿಮೆ ಹಾಗೂ ಸಾಲ ಖಾತರಿ ನಿಗಮ’ವನ್ನು ರದ್ದುಗೊಳಿಸುವ ಪ್ರಸ್ತಾವಿತ ಬ್ಯಾಂಕ್ ದಿವಾಳಿ ಮಸೂದೆಯ ಬಗ್ಗೆ ಠೇವಣಿದಾರರಲ್ಲಿ ಆತಂಕ ಶುರುವಾಗಿದೆ. ಆದರೆ, ‘ಈ ಬಗ್ಗೆ ಆತಂಕ ಬೇಡ. ಇದನ್ನು ಬದಲಿಸಲು ಅವಕಾಶವಿದೆ’ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಭರವಸೆ ನೀಡಿದ್ದಾರೆ.

‘ಹಣಕಾಸು ಗೊತ್ತುವಳಿ ಹಾಗೂ ಠೇವಣಿ ವಿಮೆ (ಎಫ್’ಆರ್‌ಡಿಐ) ಮಸೂದೆ-2017’ ಹೆಸರಿನ ಈ ವಿಧೇಯಕವನ್ನು ಡಿ.15ರಿಂದ ಆರಂಭವಾಗುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಂಡನೆಯಾಗುವ ನಿರೀಕ್ಷೆಯಿದೆ.

ಈ ವಿಧೇಯಕದಲ್ಲಿ ‘ಠೇವಣಿ ವಿಮೆ ಹಾಗೂ ಸಾಲ ಖಾತರಿ ನಿಗಮ’ವನ್ನು (ಡಿಐಸಿಜಿಇ) ರದ್ದುಗೊಳಿಸುವ ಪ್ರಸ್ತಾಪ ಇದೆ.

ಈ ನಿಗಮವು ಬ್ಯಾಂಕ್ ದಿವಾಳಿ ಆದರೂ ಕೂಡ ಠೇವಣಿದಾರರಿಗೆ 1 ಲಕ್ಷ ರು.ವರೆಗಿನ ಠೇವಣಿ ವಾಪಸು ಬರುವಂತೆ ಖಾತರಿ ನೀಡುತ್ತದೆ. ಆದರೆ ಸಿಐಸಿಜಿಇಯನ್ನು ರದ್ದು ಮಾಡಿದರೆ ಠೇವಣಿದಾರರ ಸುರಕ್ಷತೆಯ ಹಣೆಬರಹವೇನು ಎಂಬ ಆತಂಕ ಬ್ಯಾಂಕ್ ಗ್ರಾಹಕರಲ್ಲಿ ಮನೆ ಮಾಡಿದೆ.