ನವದೆಹಲಿ(ಜೂ.01): ಕೇಂದ್ರ ವಿದೇಶಾಂಗ ಸಚಿವರಾಗಿ ಮಾಜಿ ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್ ಅಧಿಕಾರ ಸ್ವೀಕರಿಸಿದ್ದು, ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸಾಗಿದ ದಾರಿಯಲ್ಲೇ ತಾವೂ ಕೂಡ ಸಾಗುವುದಾಗಿ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಟ್ವಿಟ್ ಮಾಡಿರುವ ಜೈಶಂಕರ್, ಸುಷ್ಮಾ ಸ್ವರಾಜ್ ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯಲು ಹೆಮ್ಮೆ ಎನಿಸುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ ತಮ್ಮ ಸಂಪುಟ ಸಹೋದ್ಯೋಗಿ ಮುರಳೀಧರನ್ ಅವರ ಜೊತೆ ದಿನದ 24 ಗಂಟೆಗಳ ಕಾಲ ಕೆಲಸ ನಿರ್ವಹಿಸಲು ಸಿದ್ಧ ಎಂದು ಎಂದು ಹೇಳಿದ್ದಾರೆ.

ಭಾರತ- ಅಮೆರಿಕ ಪರಮಾಣು ಒಪ್ಪಂದದ ಸಂದರ್ಭದಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದ ಜೈಶಂಕರ್ ಅವರನ್ನು ಪ್ರಧಾನಿ ಮೋದಿ ವಿದೇಶಾಂಗ ಇಲಾಖೆ ಮಂತ್ರಿಯನ್ನಾಗಿ ನೇಮಿಸಿರುವುದು ತೀವ್ರ ಕುತೂಹಲ ಮೂಡಿಸಿದೆ.