ಬಿಜೆಪಿ ನಾಯಕರ ಔತಣಕೂಟದಲ್ಲಿ ಪೌರಾಡಳಿತ ಸಚಿವ ರಮೇಶ್‌ ಜಾರಕಿಹೊಳಿ ಹಾಜರಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಆರ್.ವಿ.ದೇಶಪಾಂಡೆ ಇದರಲ್ಲಿ ತಪ್ಪೇನಿದೆ ಎಂದು ಹೇಳಿದ್ದಾರೆ. 

ಸುವರ್ಣ ವಿಧಾನಸೌಧ :  ‘ಬಿಜೆಪಿ ನಾಯಕರ ಔತಣಕೂಟದಲ್ಲಿ ಪೌರಾಡಳಿತ ಸಚಿವ ರಮೇಶ್‌ ಜಾರಕಿಹೊಳಿ ಹಾಜರಾಗಿರುವುದರಲ್ಲಿ ಯಾವುದೇ ತಪ್ಪಿಲ್ಲ’ ಎಂದು ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಪ್ರತಿಕ್ರಿಯಿಸಿದ್ದಾರೆ.

ಸುವರ್ಣ ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬೇರೆ ಪಕ್ಷದವರು ಪ್ರೀತಿ, ವಿಶ್ವಾಸದಿಂದ ಔತಣ ಕೂಟಕ್ಕೆ ಆಹ್ವಾನಿಸುತ್ತಾರೆ. ಮದುವೆಯಂತಹ ಸಮಾರಂಭಗಳಿಗೂ ಆಹ್ವಾನಿಸುತ್ತಾರೆ. ಅಲ್ಲಿ ಹೋದರೆ ತಪ್ಪೇನಿದೆ’ ಎಂದು ಪ್ರಶ್ನಿಸಿದರು.

ಸಚಿವ ಡಿ.ಕೆ.ಶಿವಕುಮಾರ ಕರೆದ ಔತಣಕೂಟಕ್ಕೆ ರಮೇಶ್‌ ಜಾರಕಿಹೊಳಿ ಗೈರಾಗಿರುವ ವಿಚಾರದ ಬಗ್ಗೆ ಪ್ರಶ್ನಿಸಿದಾಗ ‘ಅವರನ್ನೇ ಕೇಳಿ’ ಎಂದರು.

ಇನ್ನು ಮುಂದೆ ಕರೆದರೆ ಹೋಗಲ್ಲ

ಬಿಜೆಪಿಯ ಸ್ನೇಹಿತರು ಕರೆದ ಔತಣಕೂಟದಲ್ಲಿ ಪಾಲ್ಗೊಂಡಿದ್ದೆ, ಇದನ್ನು ತಪ್ಪು ತಿಳಿಯುವುದು ಬೇಡ. ಇನ್ನು ಮುಂದೆ ಅವರು ಕರೆದರೆ ನಾನು ಬರುವುದಿಲ್ಲ ಎನ್ನುತ್ತೇನೆ.

- ಜಯಮಾಲಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ