ಚೆನ್ನೈಗೆ ಹೋಗುವಷ್ಟಾದರೂ ಹಣ ಹೊಂದಿಸಬೇಕೆಂದು ನಿರ್ಧರಿಸುವ ಆತ ಅದೇ ಕುಮಾರಕೋಟ್ಟಮ್ ದೇವಸ್ಥಾನದಲ್ಲಿ ಭಿಕ್ಷೆ ಬೇಡ ತೊಡಗುತ್ತಾನೆ. ತನ್ನ ತಲೆ ಮೇಲಿದ್ದ ಟೊಪ್ಪಿಯನ್ನೇ ಭಿಕ್ಷಾತಟ್ಟೆಯಾಗಿ ಇಟ್ಟುಕೊಂಡು ಜನರಿಂದ ಭಿಕ್ಷೆ ಪಡೆಯುತ್ತಿರುತ್ತಾನೆ.
ಚೆನ್ನೈ(ಅ. 11): ಅಪರಿಚಿತ ಜಾಗಕ್ಕೆ ಹೋಗಿ ಎಲ್ಲಾ ಹಣ ಕಳೆದುಕೊಂಡಾಗ ಪರಿಸ್ಥಿತಿ ಹೇಗಿರಬೇಡ? ದಿಕ್ಕೇ ತೋಚದೆ ತೊಯ್ದಾಡುವ ಸಂದರ್ಭವೇ ಹೆಚ್ಚು. ರಷ್ಯಾ ದೇಶದಿಂದ ಬಂದಿದ್ದ ಪ್ರವಾಸಿಗನೊಬ್ಬನಿಗೂ ಇಂಥದ್ದೊಂದು ಅನುಭವವಾಯಿತು. ಸುದೈವವಶಾತ್, ಆತನ ನೆರವು ನೀಡಲು ಒಳ್ಳೆಯ ಭಾರತೀಯ ಮನಸುಗಳಿದ್ದವು. ಆ ರಷ್ಯನ್ ಪ್ರವಾಸಿಗನ ಹೆಸರು ಇವಾಂಜೆಲಿನ್.
ಸೆಪ್ಟೆಂಬರ್ 24ರಂದು ಭಾರತಕ್ಕೆ ಪ್ರವಾಸ ಬಂದ ಇವಾಂಜೆಲಿನ್ ನಿನ್ನೆ ಮಂಗಳವಾರ ಚೆನ್ನೈನಿಂದ ದೇವಸ್ಥಾನಗಳ ನಗರಿ ಕಾಂಚೀಪುರಂಗೆ ಬಂದಿದ್ದಾನೆ. ಇಲ್ಲಿರುವ ಮಂದಿರಗಳಿಗೆ ಭೇಟಿ ಕೊಡುತ್ತಾನೆ. ಶ್ರೀ ಕುಮಾರಕೋಟ್ಟಮ್ ದೇವಸ್ಥಾನದ ಬಳಿ ಇದ್ದ ಎಟಿಎಂನಲ್ಲಿ ತನ್ನ ಕಾರ್ಡ್ ಹಾಕಿ ಹಣ ತೆಗೆಯಲು ಯತ್ನಿಸುತ್ತಾನೆ. ಆದರೆ, ದುರದೃಷ್ಟಕ್ಕೆ ಆತನ ಡೆಬಿಟ್ ಕಾರ್ಡ್'ನ ಪಿನ್ ಲಾಕ್ ಆಗಿಬಿಡುತ್ತದೆ.
ಹತಾಶೆಗೊಂಡ ಇವಾಂಜೆಲಿನ್'ಗೆ ಏನು ಮಾಡಬೇಕೆಂದು ದಿಕ್ಕೇ ತೋಚದಂತಾಗುತ್ತದೆ. ಚೆನ್ನೈಗೆ ಹೋಗಲೂ ಕೂಡ ಆತನ ಬಳಿ ಬಿಡಿಗಾಸು ಇರುವುದಿಲ್ಲ. ಚೆನ್ನೈಗೆ ಹೋಗುವಷ್ಟಾದರೂ ಹಣ ಹೊಂದಿಸಬೇಕೆಂದು ನಿರ್ಧರಿಸುವ ಆತ ಅದೇ ಕುಮಾರಕೋಟ್ಟಮ್ ದೇವಸ್ಥಾನದಲ್ಲಿ ಭಿಕ್ಷೆ ಬೇಡ ತೊಡಗುತ್ತಾನೆ. ತನ್ನ ತಲೆ ಮೇಲಿದ್ದ ಟೊಪ್ಪಿಯನ್ನೇ ಭಿಕ್ಷಾತಟ್ಟೆಯಾಗಿ ಇಟ್ಟುಕೊಂಡು ಜನರಿಂದ ಭಿಕ್ಷೆ ಪಡೆಯುತ್ತಿರುತ್ತಾನೆ.
ಪೊಲೀಸರ ಮಾನವೀಯತೆ: ಈ ವಿಚಾರ ತಿಳಿದ ಶಿವಕಾಂಚಿ ಠಾಣೆ ಪೊಲೀಸರು ಆತನನ್ನು ಠಾಣೆಗೆ ಕರೆದೊಯ್ಯುತ್ತಾರೆ. ಆತನ ಪ್ರವಾಸೀ ದಾಖಲೆಗಳನ್ನು ಪರಿಶೀಲಿಸಿ ಖಚಿತಪಡಿಸಿಕೊಂಡ ಬಳಿಕ ಆತನಿಗೆ ಚೆನ್ನೈಗೆ ಹೋಗುವಷ್ಟು ಹಣ ಕೊಟ್ಟು ಕಳುಹಿಸುತ್ತಾರೆ.
ಸುಷ್ಮಾ ಭರವಸೆ:
ಇನ್ನು, ಮಾಧ್ಯಮಗಳ ವರದಿ ಮೂಲಕ ಈ ವಿಚಾರ ತಿಳಿಯುವ ಸುಷ್ಮಾ ಸ್ವರಾಜ್ ಕೂಡ ಇವಾಂಜೆಲಿನ್'ಗೆ ಸಹಾಯ ಮಾಡುವ ಭರವಸೆ ನೀಡಿದ್ದಾರೆ. ರಷ್ಯಾ ದೇಶವು ದೀರ್ಘಕಾಲದಿಂದ ಭಾರತದ ಮಿತ್ರನಾಗಿದೆ. ಚೆನ್ನೈನಲ್ಲಿರುವ ನನ್ನ ಅಧಿಕಾರಿಗಳು ನಿಮಗೆ ಎಲ್ಲಾ ನೆರವು ಒದಗಿಸುತ್ತಾರೆ ಎಂದು ಅಭಯ ನೀಡಿ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.
