ನವದೆಹಲಿ(ಅ. 03): ಪಾಕ್ ಆಕ್ರಮಿತ ಕಾಶ್ಮೀರದ ಭಯೋತ್ಪಾದನಾ ಶಿಬಿರಗಳ ಮೇಲೆ ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ಕಾರ್ಯಾಚರಣೆಯನ್ನು ರಷ್ಯಾ ಬೆಂಬಲಿಸಿದೆ. ನ್ಯೂಸ್18 ಸುದ್ದಿ ವಾಹಿನಿಯೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ರಷ್ಯಾ ರಾಯಭಾರಿ ಅಲೆಕ್ಸಾಂಡರ್ ಎಂ.ಕಡಾಕಿನ್ ಅವರು, ಭಯೋತ್ಪಾದನೆ ವಿರೋಧಿ ಹೋರಾಟದಲ್ಲಿ ರಷ್ಯಾ ದೇಶವು ಭಾರತಕ್ಕೆ ಸದಾ ಬೆಂಬಲ ನೀಡತ್ತಾ ಬಂದಿದೆ ಎಂದು ತಿಳಿಸಿದ್ದಾರೆ.
"ಭಾರತದ ಸೇನಾ ನೆಲೆಗಳು ಹಾಗೂ ಶಾಂತಿಯುತ ನಾಗರಿಕ ವಾಸಸ್ಥಳಗಳ ಮೇಲೆ ಭಯೋತ್ಪಾದಕರು ದಾಳಿ ನಡೆಸಿದಾಗ ಮಾನವ ಹಕ್ಕು ಉಲ್ಲಂಘನೆಗಳಾಗಿವೆ. ಸರ್ಜಿಕಲ್ ಕಾರ್ಯಾಚರಣೆಯನ್ನು ನಾವು ಸ್ವಾಗತಿಸುತ್ತೇವೆ. ಪ್ರತಿಯೊಂದು ದೇಶಕ್ಕೂ ತನ್ನನ್ನು ರಕ್ಷಿಸಿಕೊಳ್ಳುವ ಹಕ್ಕು ಇದ್ದೇ ಇದೆ" ಎಂದು ರಷ್ಯಾ ರಾಯಭಾರಿ ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ, ಅಲೆಕ್ಸಾಂಡರ್ ಎಂ.ಕಡಾಕಿನ್ ಅವರು ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತದ ಪ್ರದೇಶವೆಂದು ಪರೋಕ್ಷವಾಗಿ ಉಲ್ಲೇಖಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ರಷ್ಯಾ-ಪಾಕ್ ಜಂಟಿ ಸಮರಾಭ್ಯಾಸದ ಬಗ್ಗೆ ಮಾತನಾಡುತ್ತಾ, ಈ ಸಮರಾಭ್ಯಾಸವು "ಪಾಕ್ ಆಕ್ರಮಿತ ಭಾರತೀಯ ಭಾಗ ಜಮ್ಮು ಮತ್ತು ಕಾಶ್ಮೀರ"ದಲ್ಲಿ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
"ಈ ಜಂಟಿ ಸೇನಾ ಸಮರಾಭ್ಯಾಸದ ಬಗ್ಗೆ ಭಾರತ ತಲೆಕೆಡಿಸಿಕೊಳ್ಳಬೇಕಿಲ್ಲ. ಯಾಕೆಂದರೆ ಇದು ಭಯೋತ್ಪಾದನಾ ವಿರೋಧಿ ಹೋರಾಟದ ಅಭ್ಯಾಸ. ಭಾರತದ ಮೇಲೆ ಭಯೋತ್ಪಾದನಾ ದಾಳಿ ಮಾಡದಂತೆ ನಾವು ಪಾಕಿಸ್ತಾನದ ಸೇನೆಗೆ ಕಲಿಸಿಕೊಡುತ್ತೇವಾದ್ದರಿಂದ ಇದರಲ್ಲಿ ಭಾರತದ ಹಿತಾಸಕ್ತಿಯೂ ಇದೆ. ಅಲ್ಲದೇ ಇದು ಪಾಕ್ ಆಕ್ರಮಿತ ಭಾರತೀಯ ಕಾಶ್ಮೀರದಂತಹ ಸೂಕ್ಷ್ಮ ಪ್ರದೇಶಗಳಲ್ಲಿ ನಡೆದಿಲ್ಲ" ಎಂದು ರಷ್ಯನ್ ರಾಯಭಾರಿ ಹೇಳಿದ್ದಾರೆ.
(ಕೃಪೆ: ಸಿಎನ್'ಎನ್ ನ್ಯೂಸ್18)
