ಬ್ರಿಗ್ರೇಡ್ ಆರಂಭ ವಿಚಾರ ಬಿಜೆಪಿಯೊಳಗೇ ಆಕ್ಷೇಪಕ್ಕೆ ಗುರಿಯಾಗಿತ್ತು. ಹೀಗಾಗಿ ಸ್ವತಃ ಈಶ್ವರಪ್ಪನವರೇ ಬ್ರಿಗೇಡ್ ಉದ್ದೇಶ ಯಡಿಯೂರಪ್ಪರನ್ನು ಮುಂದಿನ ಸಿಎಂ ಮಾಡಲಿಕ್ಕೆ ಎಂದು ಬಹಿರಂಗವಾಗಿಯೇ ಹೇಳುತ್ತಿದ್ದಾರೆ. ಆದರೆ, ಈಗ ಈಶ್ವರಪ್ಪ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸುವ ಕರಪತ್ರವನ್ನು ಯಾರು, ಯಾಕಾಗಿ ಹಂಚಿದ್ದಾರೆ ಎನ್ನುವುದು ಮಾತ್ರ ನಿಗೂಢ.
ಹಾಸನ(ಜ.6): ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಕೆಂಗಣ್ಣಿಗೆ ಗುರಿಯಾಗಿರುವ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರನ್ನು ಮತ್ತೊಂದು ಸಮಸ್ಯೆ ಸುತ್ತಿಕೊಂಡಿದೆ. ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನಲ್ಲಿ ‘ಈಶ್ವರಪ್ಪ ಅವರೇ ಮುಂದಿನ ಮುಖ್ಯಮಂತ್ರಿ’ ಎಂಬ ಘೋಷಣೆಯುಳ್ಳ ಕರಪತ್ರಗಳು ಪ್ರತ್ಯಕ್ಷವಾಗಿವೆ.
ಬ್ರಿಗ್ರೇಡ್ ಆರಂಭ ವಿಚಾರ ಬಿಜೆಪಿಯೊಳಗೇ ಆಕ್ಷೇಪಕ್ಕೆ ಗುರಿಯಾಗಿತ್ತು. ಹೀಗಾಗಿ ಸ್ವತಃ ಈಶ್ವರಪ್ಪನವರೇ ಬ್ರಿಗೇಡ್ ಉದ್ದೇಶ ಯಡಿಯೂರಪ್ಪರನ್ನು ಮುಂದಿನ ಸಿಎಂ ಮಾಡಲಿಕ್ಕೆ ಎಂದು ಬಹಿರಂಗವಾಗಿಯೇ ಹೇಳುತ್ತಿದ್ದಾರೆ. ಆದರೆ, ಈಗ ಈಶ್ವರಪ್ಪ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸುವ ಕರಪತ್ರವನ್ನು ಯಾರು, ಯಾಕಾಗಿ ಹಂಚಿದ್ದಾರೆ ಎನ್ನುವುದು ಮಾತ್ರ ನಿಗೂಢ.
ಅಭಿಮಾನಿ ಬಳಗ: ಅರಸೀಕೆರೆ ಮತ್ತು ಬಾಣಾವರ ಸುತ್ತಮತ್ತ ಈ ಕರಪತ್ರ ಸದ್ದು ಮಾಡಿದೆ. ಹಾಸನ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಜಿವಿಟಿ ಬಸವರಾಜು, ಉದ್ಯಮಿ ಆಕಾಶ್ ಹಿರಿಯಪ್ಪ, ಮತ್ತು ನಗರ ಯುವ ಮೋರ್ಚಾ ಅಧ್ಯಕ್ಷ ರಮೇಶ್ ನಾಯ್ಡುರವರ ಭಾವಚಿತ್ರ ಈ ಕರಪತ್ರದಲ್ಲಿದೆ. ಈಶ್ವರಪ್ಪ ಅಭಿಮಾನಿ ಬಳಗ ಕಟ್ಟಲಾಗಿದ್ದು, ಅವರೇ ಮುಂದಿನ ಸಿಎಂ ಎಂದು ಇದರಲ್ಲಿ ಹೇಳಲಾಗಿದೆ.
ಕೆಲ ದಿನಗಳ ಹಿಂದೆ ರಾಯಣ್ಣ ಬ್ರಿಗೇಡ್‌ಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಯಡಿಯೂರಪ್ಪನವರೇ ಸ್ಪಷ್ಟನೆ ನೀಡಿದ್ದರು. ಜೊತೆಗೆ ಕಾರ್ಯಕರ್ತರೂ ಈ ಬ್ರಿಗೇಡ್‌ನ ಸಮಾವೇಶದಲ್ಲಿ ಭಾಗವಹಿಸದಂತೆ ಹೇಳಿಕೆಯನ್ನೂ ಹೊರಡಿಸಿದ್ದರು. ಆದರೆ ಈಶ್ವರಪ್ಪನವರು ಜ.26ರಂದು ರಾಯಣ್ಣ ಬ್ರಿಗೇಡ್ ಬೃಹತ್ ಸಮಾವೇಶ ಮಾಡಲು ಮುಂದಾಗಿದ್ದಾರೆ. ಅದಕ್ಕೆ ಯಡಿಯೂರಪ್ಪನವರು ಬರುತ್ತಾರೆ ಎಂದು ಹಾಸನದಲ್ಲೇ ಹೇಳಿದ್ದರು.
ಕಿಡಿಗೇಡಿಗಳ ಕೃತ್ಯ
ಯಾರೋ ಕಿಡಿಗೇಡಿಗಳು ಈ ರೀತಿಯ ಕರಪತ್ರ ಹಂಚಿದ್ದಾರೆ. ಈ ಬಗ್ಗೆ ಪೊಲೀಸರಿಗೂ ದೂರು ನೀಡಲಾಗಿದೆ. ಅಪರಿಚಿತ ವ್ಯಕ್ತಿಗಳು ಜಿವಿಟಿ ಬಸವರಾಜ್ ಹೆಸರಿಗೆ ಮಸಿಬಳಿಯುವ ಉದ್ದೇಶದಿಂದ ಈ ಕೃತ್ಯ ಎಸಗಿದ್ದಾರೆ. ಈಗಾಗಲೇ ಉಪಾಧ್ಯಕ್ಷ ಬಸವರಾಜು ಸಷ್ಟನೆ ನೀಡಿದ್ದು, ಅರಸೀಕೆರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಯೋಗಾರಮೇಶ್ ‘ಕನ್ನಡಪ್ರಭ’ಕ್ಕೆ ತಿಳಿಸಿದರು.
ನನ್ನ ಭಾವಚಿತ್ರ ಬಳಸಿಕೊಂಡು ಕೆ.ಎಸ್.ಈಶ್ವರಪ್ಪ ಅಭಿಮಾನಿ ಬಳಗ ಕಟ್ಟಿರುವುದಾಗಿ ಬಿಂಬಿಸಿರುವುದು ಕಿಡಿಗೇಡಿಗಳ ಕೆಲಸ. ಈ ಕುರಿತು ಪ್ರಕರಣ ದಾಖಲಿಸಿದ್ದೇನೆ.
- ಜಿವಿಟಿ ಬಸವರಾಜು, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ
