Asianet Suvarna News Asianet Suvarna News

ಬಿಳಿ, ಎತ್ತರವಿರುವ ‘ಉತ್ತಮ ಸಂತತಿ’ ಪಡೆಯಲು ಆರೋಗ್ಯ ಭಾರತಿ ಪ್ರಾಜೆಕ್ಟ್

ಈ ಯೋಜನೆಯು ಈಗ ಸಂಘದ ಶೈಕ್ಷಣಿಕ ಅಂಗಸಂಸ್ಥೆಯಾದ ವಿದ್ಯಾ ಭಾರತಿಯ ಸಹಯೋಗದಿಂದ ನಡೆಯುತ್ತಿದ್ದು, ಗುಜರಾತ್ ಹಾಗೂ ಮಧ್ಯಪ್ರದೇಶದಲ್ಲಿ ಸುಮಾರು 10 ಶಾಕೆಗಳನ್ನು ಹೊಂದಿದೆ. ಶೀಘ್ರದಲ್ಲೇ ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳದಲ್ಲೂ ಕೂಡಾ ಆರಂಭವಾಗಲಿದೆ ಎಂದು ಹೇಳಲಾಗಿದೆ.

RSS wing has prescription for fair tall customised babies

ದಂಪತಿಗಳ ಮೂರು ತಿಂಗಳು ಶುದ್ಧೀಕರಣ, ಗ್ರಹಗತಿ ಆಧಾರದ ಮೇಲೆ ಸಂಭೋಗ, ಮಗು ಹುಟ್ಟಿದ ಬಳಿಕ ಸೆಕ್ಸ್’ನಿಂದ ದೂರವುಳಿಯುವುದು, ಹಾಗೂ ನಿರ್ದಿಷ್ಟ ಆಹಾರ ಸೇವನೆಯಿಂದ ದಂಪತಿಗಳು ‘ಉತ್ತಮ ಸಂತತಿ’ಯನ್ನು ಪಡೆಯಬಹುದಾಗಿದೆ ಎಂದು ಆರೆಸ್ಸೆಸ್ ಅಂಗಸಂಸ್ಥೆಯಾಗಿರುವ ಆರೋಗ್ಯ ಭಾರತಿ ಹೇಳಿದೆಯೆಂದು ಆಂಗ್ಲ ದೈನಿಕ ವರದಿ ಮಾಡಿದೆ.

ಆರೋಗ್ಯ ಭಾರತಿಯು ಸುಮಾರು ಒಂದು ದಶಕದ ಹಿಂದೆ ಆರಂಭಿಸಿರುವ ‘ಗರ್ಭ ಸಂಸ್ಕಾರ ವಿಜ್ಞಾನ’ ಪ್ರಾಜೆಕ್ಟ್ ಈ ಕುರಿತು ಕೆಲಸ ಮಾಡುತ್ತಿದ್ದು, ಮಹಿಳೆಯು ಕೆಲವು ನಿಯಮಗಳನ್ನು ಪಾಲಿಸಿದ್ದಲ್ಲಿ ‘ಬಯಸಿದಂತೆ’ (Customized) ‘ಉತ್ತಮ ಸಂತತಿ’ ಪಡೆಯಬಹುದಾಗಿ ಸಂಡೇ ಎಕ್ಸ್’ಪ್ರೆಸ್ ವರದಿ ಮಾಡಿದೆ.

ಗುಜರಾತಿನಲ್ಲಿ ಈ ಯೋಜನೆಯು ಒಂದು ದಶಕದ ಹಿಂದೆ ಆರಂಭಿಸಲಾಗಿದ್ದು, 2015ರಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಆರಂಭಿಸಲಾಗಿದೆಯೆಂದು ಸಂಸ್ಥೆಯ ಹಿರಿಯ ಪದಾಧಿಕಾರಿಗಳು ಹೇಳಿದ್ದಾರೆ.

ಈ ಯೋಜನೆಯು ಈಗ ಸಂಘದ ಶೈಕ್ಷಣಿಕ ಅಂಗಸಂಸ್ಥೆಯಾದ ವಿದ್ಯಾ ಭಾರತಿಯ ಸಹಯೋಗದಿಂದ ನಡೆಯುತ್ತಿದ್ದು, ಗುಜರಾತ್ ಹಾಗೂ ಮಧ್ಯಪ್ರದೇಶದಲ್ಲಿ ಸುಮಾರು 10 ಶಾಖೆಗಳನ್ನು ಹೊಂದಿದೆ. ಶೀಘ್ರದಲ್ಲೇ ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳದಲ್ಲೂ ಕೂಡಾ ಆರಂಭವಾಗಲಿದೆ ಎಂದು ಅವರು ಹೇಳಿದ್ದಾರೆ.

ಉತ್ತಮ ಸಂತತಿಯ ಮೂಲಕ ಸಮರ್ಥ ಭಾರತದ ನಿರ್ಮಾಣ ನಮ್ಮ ಮುಖ್ಯ ಉದ್ದೇಶ. 2020ರೊಳಗೆ ಅಂತಹ ಸಾವಿರಾರು ಶಿಶುಗಳನ್ನು ಪಡೆಯುವುದು ನಮ್ಮ ಗುರಿ ಎಂದು ಯೋಜನೆಯ ರಾಷ್ಟ್ರೀಯ ಸಂಚಾಲಕಿ ಡಾ. ಕರಿಷ್ಮಾ ಮೋಹನ್’ದಾಸ್ ನಾರ್ವಾನಿ ಹೇಳಿದ್ದಾರೆ.

ಮೂಲತ: ಯೋಜನೆಗೆ ಜರ್ಮನಿ ಪ್ರೇರಣೆಯಾಗಿದೆ; ಜರ್ಮನಿಯು ಎರಡನೇ ಮಹಾಯುದ್ಧದ ಬಳಿಕ ಆಯುರ್ವೇದ ಪದ್ಧತಿಯನ್ನು ಪಾಲಿಸಿ ಕೇವಲ 2 ದಶಕಗಳಲ್ಲಿ ಪುನರ್ಜೀವಗೊಂಡಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ದಂಪತಿಗಳು ಅಶಿಕ್ಷಿತರಾಗಿ, ಕಡಿಮೆ ಬುದ್ದಿಮತ್ತೆಯವರಿದ್ದರೂ ಅವರು ಬುದ್ದಿವಂತ ಮಗುವನ್ನು ಪಡೆಯಬಹುದು.  ಸರಿಯಾಗಿ ನಿಯಮಗಳನ್ನು ಪಾಲಿಸಿದರೆ ಕಪ್ಪು ಮೈಬಣ್ಣದ, ಕಡಿಮೆ ಎತ್ತರವಿರುವ ದಂಪತಿಗಳು ಬಿಳಿ ಹಾಗೂ ಎತ್ತರವಿರುವ ಮಗುವನ್ನು ಪಡೆಯಬಹುದು, ಆರೋಗ್ಯ ಭಾರತೀಯ ರಾಷ್ಟ್ರೀಯ ಸಂಚಾಲಕ ಡಾ. ಹಿತೇಶ್ ಜಾನಿ ಹೇಳಿದ್ದಾರೆ.

ಹಿರಿಯ ಆರೆಸ್ಸೆಸ್ ಕಾರ್ಯಕರ್ತನಾಗಿರುವ ಡಾ. ಜಾನಿ,  ಗುಜರಾತ್ ಆಯುರ್ವೇದ ವಿವಿಯಲ್ಲಿ ಪಂಚಕರ್ಮ ವಿಭಾಗದ ಮುಖ್ಯಸ್ಥರೂ ಆಗಿದ್ದಾರೆ.  ‘ಬಯಸಿದಂತೆ’ ಹಾಗೂ ಉತ್ತಮ ಸಂತತಿ ಪಡೆಯುವ ವಿಧಾನ ಹಿಂದೂ ಧರ್ಮದ ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಈವರೆಗೆ ‘ಉತ್ತಮ ಸಂತತಿ’ ಯೋಜನೆಯಿಂದ ‘ಬಯಸಿದಂತ’ ಸುಮಾರು 450 ಶಿಶುಗಳನ್ನು ಪಡೆಯಲಾಗಿದೆ. 2020ರೊಳಗೆ ಪ್ರತಿ ರಾಜ್ಯದಲ್ಲೂ ‘ಗರ್ಭ ವಿಜ್ಞಾನ ಸಂಶೋಧನಾ ಕೇಂದ್ರ’ಗಳನ್ನು ಆರಂಭಿಸುವ ಗುರಿಯನ್ನು ಹೊಂದಲಾಗಿದೆ.

ಈ ಕುರಿತು ಈಗಾಗಲೇ ದೆಹಲಿ, ಮುಂಬೈ, ಉಡುಪಿ, ಹಾಗೂ ಕಾಸರಗೋಡು ಸೇರಿದಂತೆ ಹಲವು ಸ್ಥಳಗಳಲ್ಲಿ ಹಲವಾರು ಉಪನ್ಯಾಸ ಹಾಗೂ ಸಮಾಲೋಚನಾ ಕಾರ್ಯಕ್ರಮಗಳನ್ನು ಆರೋಗ್ಯ ಭಾರತಿಯು ಹಮ್ಮಿಕೊಂಡಿದೆಯೆಂದು ಡಾ. ನಾರ್ವಾನಿ ಹೇಳಿದ್ದಾರೆ.

ಈ ಯೋಜನೆಯು ಸಂತಾನೋತ್ಪತ್ತಿಯ ಸಹಜ ಪ್ರಕ್ರಿಯೆಯಲ್ಲಿ ಯಾವುದೇ ಹಸ್ತಕ್ಷೇಪ ನಡೆಸುವುದಿಲ್ಲ, ಬದಲಾಗಿ ಆಯುರ್ವೇದ ಪದ್ಧತಿಯ ಆಧಾರದಲ್ಲಿ ನಡೆಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ದೈಹಿಕವಾಗಿ ಹಾಗೂ ಮಾನಸಿಕವಾಗಿ ನಮಗೆ ಬೇಕಾಗಿರುವಂತಹ ಮಗುವನ್ನು ಪಡೆಯುವುದು ಆಯುರ್ವೇದದಿಂದ ಸಾಧ್ಯ. ಗರ್ಭಧಾರಣೆಯ ಆರನೇ ತಿಂಗಳಿನಲ್ಲಿ ಶಿಶುವಿನ ಬುದ್ದಿಮತ್ತೆ ಬೆಳೆಯುತ್ತದೆ.  ಆ ಅವಧಿಯಲ್ಲಿ ತಾಯಿಯು ಓದು-ಕೇಳು-ಊಟದ ನಿರ್ದಿಷ್ಟ ನಿಯಮಗಳನ್ನು ಪಾಲಿಸಿದ್ದಲ್ಲಿ, ಮಗುವಿನಲ್ಲಿ ‘ಬಯಸಿದಂತ’ ಬುದ್ದಿಮತ್ತೆ ಪಡೆಯಬಹುದಾಗಿದೆ.

ದಂಪತಿಗಳಲ್ಲಿರುವ ಅನುವಂಶಿಕ ನ್ಯೂನತೆಗಳು ಶಿಶುವಿಗೆ ವರ್ಗಾವಣೆಯಾಗದಂತೆ ‘ವಂಶವಾಹಿ’ (ಜೀನ್)ಗಳನ್ನು ಈ ಪ್ರಕ್ರಿಯೆಯಲ್ಲಿ ದುರಸ್ತಿಪಡಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಗುಜರಾತ್ ಆಯುರ್ವೇದ ವಿವಿಯ ಹೊರತು  ಗಾಂಧಿನಗರದಲ್ಲಿರುವ ಮಕ್ಕಳ ವಿವಿ ಹಾಗೂ ಭೋಪಾಲಿನ ಅಟಲ್ ಬಿಹಾರಿ ವಾಜಪೇಯಿ ಹಿಂದಿ ವಿವಿಯಲ್ಲೂ ಗರ್ಭ ವಿಜ್ಞಾನ ಸಂಸ್ಕಾರಗಳ ಕುರಿತು ಪಠ್ಯವನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.

  

Latest Videos
Follow Us:
Download App:
  • android
  • ios