ನವದೆಹಲಿ: ಇತ್ತೀಚಿನ ಗುಜರಾತ್ ಚುನಾವಣೆ ಗೆಲುವಿನ ಸಮಾಧಾನದಲ್ಲಿರುವ ಬಿಜೆಪಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಎಚ್ಚರಿಕೆಯ ಸಂದೇಶ ನೀಡಿದೆ. ದೇಶದ ಗ್ರಾಮೀಣ ಭಾಗದ ಕೃಷಿಕರ ಸಂಕಷ್ಟ ಹಾಗೂ ನಿರುದ್ಯೋಗ ಸಮಸ್ಯೆ 2019ರ ಲೋಕಸಭೆ ಚುನಾವಣೆಯಲ್ಲಿ ಮಾರಕವಾಗ ಬಲ್ಲದು ಎಂದು ಆರೆಸ್ಸೆಸ್ ಎಚ್ಚರಿಕೆ ನೀಡಿದೆ. ಆದರೆ ಇದರ ನಡುವೆಯೇ ಈ ಸಮಸ್ಯೆಗಳನ್ನು ಬಗೆಹರಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡುವುದಾಗಿ ಬಿಜೆಪಿಯು ಆರೆಸ್ಸೆಸ್‌ಗೆ ಭರವಸೆ ನೀಡಿದೆ.

ದೆಹಲಿಯಲ್ಲಿ ಗುರುವಾರ ಮತ್ತು ಶುಕ್ರವಾರ ಸಭೆ ನಡೆಸಿದ ಆರ್‌ಎಸ್‌ಎಸ್ ಮುಖಂಡರು, ಬಿಜೆಪಿಗೆ 2019ರ ಚುನಾವಣೆಯಲ್ಲಿ ಎದುರಾಗಬಹುದಾದ ಸವಾಲುಗಳನ್ನು ಪಟ್ಟಿ ಮಾಡಿದ್ದಾರೆ. ಈ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೂಡ ಭಾಗಿಯಾಗಿದ್ದರು.

ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹೊರತಾಗಿಯೂ ಕೃಷಿಕರ ಸಂಕಷ್ಟ ಹಾಗೂ ಸುಶಿಕ್ಷಿತ ಯುವಕರಿಗೆ ಸೂಕ್ತ ಉದ್ಯೋಗ ದೊರೆಯದೇ ಇರುವುದು ಗ್ರಾಮೀಣ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದ್ದು, ಚುನಾವಣೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಬಲ್ಲದು. 

ಒಂದು ವೇಳೆ ಮೋದಿ ಸರ್ಕಾರ ಈ ವಿಷಯವಾಗಿ ಕ್ರಮ ಕೈಗೊಳ್ಳಲು ವಿಫಲವಾದರೆ 2018ರ ಕರ್ನಾಟಕ ಸೇರಿದ ವಿವಿಧ ರಾಜ್ಯಗಳ ವಿಧಾನಸಭೆ ಮತ್ತು 2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ಸಾಧಿಸುವುದು ಕಷ್ಟವಾಗಬಹುದು ಎಂದು ಆರ್ ಎಸ್‌ಎಸ್ ಎಚ್ಚರಿಕೆ ನೀಡಿದೆ. ‘ಕೃಷಿ ವಲಯದ ಸಂಕಷ್ಟದ ಬಗ್ಗೆ ಹಾಗೂ ಕಡಿಮೆ ಪ್ರಮಾಣದ ಉದ್ಯೋಗ ಸೃಷ್ಟಿಯ ಬಗ್ಗೆ ನಾವು ಪದೇ ಪದೇ ಕಳವಳ ವ್ಯಕ್ತಪಡಿಸುತ್ತಲೇ ಇದ್ದೇವೆ.

ಒಂದು ವೇಳೆ ಮೋದಿ ಸರ್ಕಾರ ನಮ್ಮ ಎಚ್ಚರಿಕೆಯನ್ನು ಮನಗಂಡಿದ್ದರೆ ಗುಜರಾತಿನಲ್ಲಿ ತಿಣುಕಾಡಿ ಗೆಲ್ಲಬೇಕಾದ ಪರಿಸ್ಥಿತಿ ಬರುತ್ತಿರಲಿಲ್ಲ’ ಎಂದು ಆರ್‌ಎಸ್‌ಎಸ್‌ನೊಂದಿಗೆ ಗುರುತಿಸಿಕೊಂಡಿರುವ ಭಾರತೀಯ ಮಜದೂರ್ ಸಂಘದ ಸದಸ್ಯರೊಬ್ಬರು ಸಭೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ‘ಸರ್ಕಾರದ ತಪ್ಪು ಆರ್ಥಿಕ ನೀತಿಗಳು ರೈತರ ಮತ್ತು ಯುವಕರ ಸಂಕಷ್ಟಕ್ಕೆ ಕಾರಣ ವಾಗಿದೆ. ಸರಿಪಡಿಸುವ ಕ್ರಮವನ್ನೂ ನಾವು ಸೂಚಿಸಿ ದ್ದೆವು. ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ಹೋಗಬಹುದು ಎಂದೂ ಎಚ್ಚರಿಸಿದ್ದೆವು’ ಎಂದು ಸ್ವದೇಶಿ ಜಾಗರಣ ಮಂಚ್ ಹಾಗೂ ಆರ್‌ಎಸ್‌ಎಸ್ ಆರ್ಥಿಕ ವಿಭಾಗದ ಮುಖಂಡರೊಬ್ಬರು ಸಭೆಯ ಗಮನ ಸೆಳೆದರು ಎಂದು ಮೂಲಗಳು ತಿಳಿಸಿವೆ.