ನವದೆಹಲಿ[ಡಿ.10]: ಶ್ರೀರಾಮಚಂದ್ರನ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಹಿಂದು ಸಂಘಟನೆಗಳು ನಿರಂತರವಾಗಿ ಆಗ್ರಹಪಡಿಸುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಕೇಂದ್ರ ಸರ್ಕಾರದ ವಿರುದ್ಧ ಬಿಜೆಪಿಯ ಮಾತೃಸಂಸ್ಥೆ ಆರ್‌ಎಸ್ ಎಸ್ (ರಾಷ್ಟ್ರೀಯ ಸ್ವಯಂಸೇವಕ ಸಂಘ) ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದೆ. 

‘ಇಂದು ಅಧಿಕಾರದಲ್ಲಿರುವವರು ರಾಮಮಂದಿರ ಕಟ್ಟುವ ಭರವಸೆ ನೀಡಿದ್ದರು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಬೇಕೆಂಬ ಜನರ ಬೇಡಿಕೆಯನ್ನು ಅವರು ಆಲಿಸಿಕೊಳ್ಳಬೇಕು. ಮಂದಿರಕ್ಕಾಗಿ ನಾವೇನು ಭಿಕ್ಷೆ ಬೇಡುತ್ತಿಲ್ಲ. ನಮ್ಮ ಭಾವನೆಗಳನ್ನು ಹೇಳಿಕೊಳ್ಳುತ್ತಿದ್ದೇವೆ. ಈ ದೇಶಕ್ಕೆ ರಾಮ ರಾಜ್ಯದ ಅಗತ್ಯವಿದೆ’ ಎಂದು ಆರ್‌ಎಸ್‌ಎಸ್ ಹಿರಿಯ ನಾಯಕ ಸುರೇಶ್ ‘ಭಯ್ಯಾಜಿ’ ಜೋಶಿ ಕಿಡಿಕಾರಿದ್ದಾರೆ.

ಮಂಗಳವಾರದಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ರಾಮಮಂದಿರಕ್ಕಾಗಿ ಒತ್ತಡ ಹೇರಲು ದೆಹಲಿಯ ರಾಮಲೀಲಾ ಮೈದಾನದಲ್ಲಿ ವಿಶ್ವ ಹಿಂದು ಪರಿಷತ್ ಭಾನುವಾರ ಹಮ್ಮಿಕೊಂಡಿದ್ದ ಬೃಹತ್ ರ‌್ಯಾಲಿಯಲ್ಲಿ ಮಾತನಾಡಿದ ಅವರು, ಯಾವ ದೇಶ ನ್ಯಾಯಾಂಗ ವ್ಯವಸ್ಥೆಯಲ್ಲಿ ಅಪನಂಬಿಕೆ ಬೆಳೆಸಿಕೊಳ್ಳುವುದೋ ಅದು ಅಭಿವೃದ್ಧಿಯ ಹಾದಿಯಲ್ಲಿ ನಡೆಯಲಾರದು. 

ಸುಪ್ರೀಂಕೋರ್ಟ್ ಈ ವಿಚಾರ ಅರ್ಥ ಮಾಡಿಕೊಂಡು, ಸಾರ್ವಜನಿಕರ ಭಾವನೆಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. ಅಗತ್ಯಬಿದ್ದರೆ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಒತ್ತಾಯಿಸಿದರು. ಯಾವುದೇ ಸಮುದಾಯದ ಜತೆ ನಾವು ಸಂಘರ್ಷಕ್ಕೆ ಇಳಿದಿಲ್ಲ. ಭಿಕ್ಷೆಯನ್ನೂ ಬೇಡುತ್ತಿಲ್ಲ. ಕಾನೂನು ರೂಪಿಸುವುದೊಂದೇ ರಾಮಮಂದಿರಕ್ಕೆ ಪರಿಹಾರ. ಭರವಸೆ ಈಡೇರುವವರೆಗೂ ಚಳವಳಿ ನಿಲ್ಲುವುದಿಲ್ಲ ಎಂದು ಹೇಳಿದರು. ವಿಎಚ್‌ಪಿ ಅಧ್ಯಕ್ಷ ವಿಷ್ಣು ಸದಾಶಿವ ಕೋಕ್ಜೆ ಮಾತನಾಡಿ, ಜನರ ಭಾವನೆಗಳನ್ನು ಗೌರವಿಸಬೇಕು. ಪ್ರಜಾಪ್ರಭುತ್ವದಲ್ಲಿ ಜನರೇ ಸುಪ್ರೀಂ ಹೊರತು ಕೋರ್ಟು ಅಲ್ಲ. ಮಸೀದಿ ಜಾಗದಲ್ಲಿ ನಾವು ರಾಮಮಂದಿರ ಬಯಸುತ್ತಿದ್ದೇವೆ ಎಂಬುದು ತಪ್ಪು ಕಲ್ಪನೆ. ದೇಗುಲವನ್ನು ನಾಶಪಡಿಸಿ ಮಸೀದಿಯನ್ನು ಕಟ್ಟಲಾಗಿದೆ. ರಾಮಮಂದಿರಕ್ಕಾಗಿ ಬೇಡಿಕೆ ಚುನಾವಣಾ ವಿಷಯವಲ್ಲ. ದೇಶದಲ್ಲಿ ಪ್ರತಿ ಆರು ತಿಂಗಳಿಗೆ ಚುನಾವಣೆ ನಡೆಯುತ್ತಿರುತ್ತದೆ ಎಂದರು. 

ಭಾನುವಾರ ದೆಹಲಿಯಲ್ಲಿ ಆಯೋಜನೆಗೊಂಡಿದ್ದ ಈ ರ‌್ಯಾಲಿಗೆ ದೆಹಲಿ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳ ಲಕ್ಷಾಂತರ ಜನ ಭಾಗವಹಿಸಿದ್ದರು. ರ‌್ಯಾಲಿಯಲ್ಲಿ ಯಶಸ್ವಿಗೊಳಿಸಲು ವಿಎಚ್‌ಪಿ ನಾಯಕರು ಮನೆಮನೆಗೆ ತೆರಳಿ ಪ್ರಚಾರ ನಡೆಸಿದ್ದರು. ಹೀಗಾಗಿ ದಿಲ್ಲಿ ರ‌್ಯಾಲಿಗೆ ಭಾರೀ ಪ್ರಮಾಣದ ಜನ ಸೇರಿದ್ದು, ರಾಮಲೀಲಾ ಮೈದಾನ ಪೂರ್ಣ ಕೇಸರಿಮಯವಾಗಿತ್ತು. ರ‌್ಯಾಲಿಯಲ್ಲಿ ಭಾಗವಹಿಸಿದ್ದ ರಾಮಭಕ್ತರು, ನಮಗೆ ಸ್ಯಾಂಪಲ್ ಬೇಡ, ಟೆಂಪಲ್ ಬೇಕು, ಮತ್ತೆ ರಾಮರಾಜ್ಯ ಸ್ಥಾಪಿಸುತ್ತೇವೆ, ಅಲ್ಲಿಯೇ ರಾಮಮಂದಿರ ನಿರ್ಮಿಸುತ್ತೇವೆ ಎಂಬ ಘೋಷಣೆಗಳನ್ನು ಕೂಗಿದರು.