ಹೈದರಾಬಾದ್(ಜು.03): ತೆಲಂಗಾಣದಲ್ಲಿ ಪಕ್ಷದ ಶಕ್ತಿ ವೃದ್ಧಿಸಲು ಶತಪ್ರಯತ್ನ ನಡೆಸುತ್ತಿರುವ ಬಿಜೆಪಿ, ಮುಂದೊಂದು ದಿನ ಇಡೀ ತೆಲಂಗಾಣವನ್ನು ತೆಕ್ಕೆಗೆ ತೆಗೆದುಕೊಳ್ಳುವ ಇರಾದೆಯೊಂದಿಗೆ ಕಾರ್ಯಪ್ರವೃತ್ತವಾಗಿದೆ.

ಈ ಮಧ್ಯೆ ರಾಜ್ಯದಲ್ಲಿ ತನ್ನ ಪ್ರಭಾವ ವೃದ್ಧಿಸಲು ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯ ಅಲ್ಪಸಂಖ್ಯಾತ ಘಟಕ ಮುಸ್ಲಿಂ ರಾಷ್ಟ್ರೀಯ ಮಂಚ್ ಕೂಡ ಸರ್ವಸನ್ನದ್ಧವಾಗಿದೆ.

ನಾಲ್ಕು ವರ್ಷಗಳ ಹಿಂದೆ ಹೈದರಾಬಾದ್’ನಲ್ಲಿ ಕೇವಲ ಇಬ್ಬರು ಸದಸ್ಯರೊಂದಿಗೆ ತನ್ನ ಮೊದಲ ಘಟಕ ಆರಂಭಿಸಿದ್ದ ಮುಸ್ಲಿಂ ರಾಷ್ಟ್ರೀಯ ಮಂಚ್, ಇದೀಗ ನಗರದಲ್ಲಿ ಸುಮಾರು 3 ಸಾವಿರ ಸದಸ್ಯರನ್ನು ಹೊಂದಿದೆ.

ಇದೀಗ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ರಾಷ್ಟ್ರೀಯ ಮುಸ್ಲಿಂ ಮಂಚ್’ನ ಘಟಕಗಳನ್ನು ತೆರೆಯಲಾಗಿದ್ದು, ರಾಜ್ಯದಲ್ಲಿ ಒಟ್ಟು 10 ಸಾವಿರ ಸದಸ್ಯತ್ವ ಪಡೆಯುವ ಇರಾದೆ ಸಂಘಟನೆಗಿದೆ.

ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವ MRM ಮುಖ್ಯಸ್ಥ ಇಂದ್ರೇಶ್ ಕುಮಾರ್, ಕಳೆದ ಭಾನುವಾರ ಹೈದರಾಬಾದ್’ನಲ್ಲಿ ಮುಸ್ಲಿಂ ನಾಯಕರೊಂದಿಗೆ ಸಭೆ ನಡೆಸಿದ್ದಾರೆ. ಇಂದ್ರೇಶ್ ಕುಮಾರ್ ಅವರಿಗೆ ನಗರದ ಪ್ರಮುಖ ಮುಸ್ಲಿಂ ವಿದ್ವಾಂಸರಾದ  ಶೇಖ್ ಮೊಯಿನುದ್ದೀನ್ ಶಾ ಖಾದ್ರಿ ಸಾಥ್ ನೀಡಿದ್ದಾರೆ.

ಮುಂದಿನ ತಿಂಗಳು ಆಂಧ್ರದ ಎಲ್ಲಾ ಜಿಲ್ಲೆಗಳಲ್ಲೂ ಘಟಕಗಳನ್ನು ತೆರೆಯಲು MRM ನಿರ್ಧರಿಸಿದ್ದು, ಪ್ರಮುಖವಾಗಿ ಮುಸ್ಲಿಂ ಬಾಹುಳ್ಯ ರಾಜ್ಯವಾದ ತೆಲಂಗಾಣದಲ್ಲಿ ತನ್ನ ಬದ್ಧ ವೈರಿ ಎಐಎಂಐಎಂ ನ್ನು ಮಣಿಸಲು ಹಾಗೂ ಮುಸ್ಲಿಮರ ಬೆಂಬಲ ಗಳಿಸಲು ಮಿಶನ್ 2024 ಘೊಷಣೆಯೊಂದಿಗೆ ಕಾರ್ಯೋನ್ಮುಖವಾಗಿದೆ.