ಗುಂಪು ಹತ್ಯೆ ಭಾರತೀಯತೆಯ ಲಕ್ಷಣ ಅಲ್ಲ: ಭಾಗವತ್ ಸುಮ್ಮನೆ ಮಾತಾಡಲ್ಲ!
ಗುಂಪು ಹತ್ಯೆ ಭಾರತೀಯ ಸಂಸ್ಕೃತಿಯ ಭಾಗವಲ್ಲ ಎಂದ ಮೋಹನ್ ಭಾಗವತ್| ನಾಗ್ಪುರದ ಆರ್‌ಎಸ್‌ಎಸ್ ಮುಖ್ಯ ಕಚೇರಿಯಲ್ಲಿ ಭಾಗವತ್ ಭಾಷಣ| ದಸರಾ ಹಬ್ಬದ ಪ್ರಯುಕ್ತ ವಿಜಯದಶಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಆರ್‌ಎಸ್‌ಎಸ್ ಮುಖ್ಯಸ್ಥ| ಎಲ್ಲರೊಂದಿಗೆ ಸಹಬಾಳ್ವೆ ನಡೆಸುವ ಕಲೆ ಭಾರತೀಯರಿಗೆ ಯಾರೂ ಹೇಳಿ ಕೊಡಬೇಕಿಲ್ಲ ಎಂದ ಭಾಗವತ್| 'ಹತ್ಯೆ ಎಂಬ ಪದವನ್ನು ಅನ್ಯ ಧರ್ಮದ ಧಾರ್ಮಿಕ ಪಠ್ಯದಿಂಧ ಎರವಲು ಪಡೆಯಲಾಗಿದೆ'| ' ಸಂವಿಧಾನ ವಿರೋಧಿ ಚಟುವಟಿಕೆಗಳನ್ನು ಸಂಘ ಪರಿವಾರ ಎಂದಿಗೂ ಬೆಂಬಲಸುವುದಿಲ್ಲ'| ಇಡೀ ದೇಶಕ್ಕೆ ಬಿಜೆಪಿ ಮೇಲೆ ನಂಬಿಕೆ ಇದೆ ಎಂದ ಆರ್‌ಎಸ್‌ಎಸ್ ಮುಖ್ಯಸ್ಥ| ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದತಿ ಬೆಂಬಲಿಸಿದ ಭಾಗವತ್| ದೇಶದ ಜನರ ಆಶೋತ್ತರ ಈಡೇರಿಸುವ ಧೈರ್ಯ ಬಿಜೆಪಿಗಿದೆ ಎಂದ ಭಾಗವತ್| 'ದೇಶದ ಒಳಗಿರುವ ದುಷ್ಟ ಶಕ್ತಿಗಳೊಂದಿಗಿನ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಬೇಕಿದೆ'|
ನಾಗ್ಪುರ್(ಅ.08): ಹತ್ಯೆ ಎಂಬ ಪದ ಭಾರತೀಯ ಸಂಸ್ಕೃತಿಯ ಭಾಗವಲ್ಲ ಎಂದಿರುವ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಗುಂಪು ಹತ್ಯೆಗಳು ದೇಶದ ಸಂಸ್ಕೃತಿಗೆ ಎದುರಾಗಿರುವ ಅತೀ ದೊಡ್ಡ ಸವಾಲು ಎಂದು ಅಭಿಪ್ರಾಯಪಟ್ಟಿದ್ದಾರೆ.
ನಾಗ್ಪುರದ ಆರ್‌ಎಸ್‌ಎಸ್ ಮುಖ್ಯ ಕಚೇರಿಯಲ್ಲಿ ಆಯೋಜಿಸಲಾಗಿದ್ದ ವಿಜಯದಶಮಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಭಾಗವತ್, ಸೋದರತ್ವವನ್ನು ಪ್ರತಿಪಾದಿಸುವ ಭಾರತೀಯರು ಹತ್ಯೆ ಎಂಬ ಪದವನ್ನು ಪ್ರತ್ಯೇಕ ಧಾರ್ಮಿಕ ಪಠ್ಯದಿಂದ ತಿಳಯುವಂತಾಗಿದೆ ಎಂದು ಹೇಳಿದರು.
ಸಂವಿಧಾನ ವಿರೋಧಿ ಚಟುವಟಿಕೆಗಳನ್ನು ಸಂಘ ಪರಿವಾರ ಎಂದಿಗೂ ಬೆಂಬಲಸುವುದಿಲ್ಲ ಎಂದಿರುವ ಆರ್‌ಎಸ್‌ಎಸ್ ಮುಖ್ಯಸ್ಥ, ಇಂತಹ ನೀಚ ಕೃತ್ಯ ಮಾಡುವವರೊಂದಿಗೆ ಸಂಘಟನೆಯನ್ನು ತಳುಕು ಹಾಕಬೇಡಿ ಎಂದು ವಿರೋಧಿಗಳಿಗೆ ಎಚ್ಚರಿಸಿದರು.
ಭಾರತ ಎಲ್ಲ ಧರ್ಮೀಯರಿಗೆ ಸೇರಿದ್ದು, ಎಲ್ಲರೊಂದಿಗೆ ಸಹಬಾಳ್ವೆ ನಡೆಸುವ ಕಲೆ ಭಾರತೀಯರಿಗೆ ಯಾರೂ ಹೇಳಿ ಕೊಡಬೇಕಿಲ್ಲ ಎಂದು ಮೋಹನ್ ಭಾಗವತ್ ಈ ವೇಳೆ ಹೇಳಿದರು. ಜಾತಿ ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡುವುದು ರಾಜಕಾರಣದಲ್ಲಿ ಮಾತ್ರ ಸಾಧ್ಯ ಎಂದು ಮಾರ್ಮಿಕವಾಗಿ ನುಡಿದರು.
ಇದೇ ವೇಳೆ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ ಮೋಹನ್ ಭಾಗವತ್, ಸರ್ಕಾರಕ್ಕೆ ದೇಶದ ಜನರ ಆಶೋತ್ತರಗಳನ್ನು ಈಡೇರಿಸುವ ಧೈರ್ಯ ಇದೆ ಎಂಬುದು ಇದರಿಂದ ಸಾಬೀತಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇಡೀ ದೇಶಕ್ಕೆ ಬಿಜೆಪಿ ಮೇಲೆ ನಂಬಿಕೆ ಇದ್ದು, 370ನೇ ವಿಧಿ ರದ್ದತಿಯಿಂದ ಈ ನಂಬಿಕೆ ಮತ್ತಷ್ಟು ಗಟ್ಟಿಗೊಂಡಿದೆ ಎಂದು ಭಾಗವತ್ ಹೇಳಿದರು. 2019ರ ಲೋಕಸಭೆ ಚುನಾವಣೆ ಬಳಿಕ ಇಡೀ ವಿಶ್ಚಕ್ಕೆ ಭಾರತದ ಶಕ್ತಿಯ ಅರಿವಾಗುತ್ತಿದ್ದು, ಇದಕ್ಕೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ದಿಟ್ಟ ನಿರ್ಧಾರಗಳು ಕಾರಣ ಎಂದು ಅವರು ನುಡಿದರು.
ದೇಶದ ನೆಲ, ಜಲ ಹಾಗೂ ವಾಯು ಗಡಿಗಳು ಸುರಕ್ಷಿತವಾಗಿದ್ದು, ದೇಶದ ಒಳಗಿರುವ ದುಷ್ಟ ಶಕ್ತಿಗಳೊಂದಿಗಿನ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಬೇಕಿದೆ ಎಂದು ಮೋಹನ್ ಭಾಗವತ್ ಈ ವೇಳೆ ಕರೆ ನೀಡಿದರು.