ನವದೆಹಲಿ(ಆ.16): ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನಿರ್ಧಾರವನ್ನು, RSS ಮುಖ್ಯಸ್ಥ ಮೋಹನ್ ಭಾಗವತ್ ಬೆಂಬಲಿಸಿದ್ದಾರೆ.

ಮೋದಿ ಸರ್ಕಾರದ ನಿರ್ಧಾರವನ್ನು ಐತಿಹಾಸಿಕ ಎಂದು ಹೇಳಿರುವ ಮೋಹನ್ ಭಾಗವತ್,  ಇಂತಹ ದಿಟ್ಟ ನಿರ್ಧಾರಕ್ಕಾಗಿ ದೇಶ ದಶಕಗಳಿಂದ ಕಾಯುತ್ತಿತ್ತು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಮಹರಾಷ್ಟ್ರದ ನಾಗ್ಪುರದಲ್ಲಿರುವ RSS ಮುಖ್ಯ ಕಾರ್ಯಾಲಯದಲ್ಲಿ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಮೋಹನ್ ಭಾಗವತ್, ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಪ್ರಧಾನಿ ಮೋದಿ ಸರ್ಕಾರದ ದಿಟ್ಟತನವನ್ನು ಪ್ರಶಂಸಿದರು.

ದೇಶದ ಒಳಿತಾಗಿ ದಿಟ್ಟ ನಿರ್ಧಾರ ಕೈಗೊಳ್ಳುವುದು ಮೋದಿಯಿಂದ ಮಾತ್ರ ಸಾಧ್ಯ ಎಂಬುದು ಸದ್ಯ ದೇಶದ ಜನರ ಅಭಿಪ್ರಾಯವಾಗಿದ್ದು, ಇದು ನಿಜವೂ ಹೌದು ಎಂದು ಬಾಗವತ್ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದಾಗಬೇಕೆಂಬುದು RSS ಸೇರಿದಂತೆ ಎಲ್ಲಾ ದೇಶಭಕ್ತರ ಕನಸಾಗಿತ್ತು. ಈ ಕನಸನ್ನು ಮೋದಿ ಸರ್ಕಾರ ಈಡೇರಿಸಿದೆ ಎಂದು ಭಾಗವತ್ ನುಡಿದರು.