ಭೋಪಾಲ್ [ಅ.18]: ನವೆಂಬರ್ 28ರಂದು ನಡೆಯಲಿರುವ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಹಾಲಿ 78 ಶಾಸಕರಿಗೆ ಟಿಕೆಟ್ ನೀಡದಿರಲು ಆರ್ ಎಸ್ ಎಸ್ ಬಿಜೆಪಿಗೆ ಸಲಹೆ ನೀಡಿದೆ.

ಅದೆ ರೀತಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಪ್ರಸ್ತುತ ಪ್ರತಿನಿಧಿಸುತ್ತಿರುವ ಬುದ್ನಿ ಕ್ಷೇತ್ರದ ಬದಲಾಗಿ ಗೋವಿಂದಪುರದಲ್ಲಿ ಸ್ಪರ್ಧಿಸುವಂತೆ ಸಲಹೆ ನೀಡಿದೆ.

78 ಶಾಸಕರು ತಮ್ಮ ಕ್ಷೇತ್ರದಲ್ಲಿ ಕಳಪೆ ಪ್ರದರ್ಶನ ನೀಡಿರುವ ಬಗ್ಗೆ ಮಾಹಿತಿ ಪಡೆದಿರುವ ಸಂಘ ಪರಿವಾರ ರಾಜ್ಯ ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಸಭೆಯಲ್ಲಿ ಕೇವಲ ಗೆಲ್ಲುವ ಅಭ್ಯರ್ಥಿಗಳಿಗೆ ಮಾತ್ರ ಟಿಕೆಟ್ ನೀಡುವಂತೆ ತಿಳಿಸಿದೆ. ನ್ಯಾಯಾಲಯದಲ್ಲಿ ಪ್ರಕರಣಗಳಿರುವ ಯಾವೊಬ್ಬ ಅಭ್ಯರ್ಥಿಗಳಿಗೂ ಟಿಕೆಟ್ ನೀಡಬಾರದೆಂದು ಪಕ್ಷದ ಹೈಕಮಾಂಡ್ ಕೂಡ ಖಡಕ್ ಆಗಿ ಸೂಚನೆ ನೀಡಿದೆ ಎನ್ನಲಾಗಿದೆ.

ಈಗಾಗಲೇ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್, ರಾಜ್ಯ ಬಿಜೆಪಿ ಅಧ್ಯಕ್ಷ  ವಿನಯ್ ಸಹಸ್ರಬುದ್ಧೆ ಹಾಗೂ ಕಾರ್ಯಕಾರಿಣಿ ಪ್ರಧಾನ ಕಾರ್ಯದರ್ಶಿ ಸುಹಾಸ್ ಭಗತ್ ಅವರು ಅರ್ಹತೆ, ಮಾನದಂಡ ಆಧರಿಸಿ ಗೆಲ್ಲುವ ಅಭ್ಯರ್ಥಿಗಳ ಟಿಕೆಟ್ ನೀಡುವ ಪಟ್ಟಿ ತಯಾರಿಸಿದ್ದಾರೆ.