ಬಿಎಸ್‌ವೈ ಬಿಟ್ಟು ಬಿಜೆಪಿಗೆ ಹೊಸ ರಾಜ್ಯಾಧ್ಯಕ್ಷ

RSS Advice To Change BJP State President BS Yeddyurappa
Highlights

ವಿಧಾನಸಭೆಯ ಪ್ರತಿಪಕ್ಷದ ನಾಯಕರಾಗಿರುವ ಬಿ.ಎಸ್‌.ಯಡಿಯೂರಪ್ಪ ಅವರನ್ನು ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಯಿಂದ ಮುಕ್ತಿಗೊಳಿಸಿ ಆ ಜಾಗಕ್ಕೆ ಹೊಸಬರನ್ನು ನೇಮಕ ಮಾಡಬೇಕು ಎಂಬ ಸಲಹೆಯನ್ನು ಸಂಘ ಪರಿವಾರ ಬಿಜೆಪಿ ಹೈಕಮಾಂಡ್‌ಗೆ ನೀಡಿದೆ.

ವಿಜಯ್‌ ಮಲಗಿಹಾಳ

ಬೆಂಗಳೂರು :  ಒಬ್ಬ ವ್ಯಕ್ತಿಗೆ ಒಂದು ಹುದ್ದೆ ಎಂಬ ತತ್ವದ ಅಡಿಯಲ್ಲಿ ವಿಧಾನಸಭೆಯ ಪ್ರತಿಪಕ್ಷದ ನಾಯಕರಾಗಿರುವ ಬಿ.ಎಸ್‌.ಯಡಿಯೂರಪ್ಪ ಅವರನ್ನು ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಯಿಂದ ಮುಕ್ತಿಗೊಳಿಸಿ ಆ ಜಾಗಕ್ಕೆ ಹೊಸಬರನ್ನು ನೇಮಕ ಮಾಡಬೇಕು ಎಂಬ ಸಲಹೆಯನ್ನು ಸಂಘ ಪರಿವಾರ ಬಿಜೆಪಿ ಹೈಕಮಾಂಡ್‌ಗೆ ನೀಡಿದೆ.

ಆದರೆ, 2019ರ ಲೋಕಸಭಾ ಚುನಾವಣೆಯಲ್ಲಿ ಒಂದೊಂದು ಸ್ಥಾನ ಕೂಡ ತೀರಾ ಅಗತ್ಯವಾಗಿರುವ ಕಾರಣ, ಈ ಹಂತದಲ್ಲಿ ಯಡಿಯೂರಪ್ಪ ಅವರನ್ನು ಅಧ್ಯಕ್ಷ ಸ್ಥಾನದಿಂದ ಬದಲಾಯಿಸುವುದು ಅಪಾಯಕಾರಿಯಲ್ಲವೇ ಎಂಬ ಜಿಜ್ಞಾಸೆ ಹೈಕಮಾಂಡನ್ನು ಕಾಡತೊಡಗಿದೆ.

ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಜಾತಿ ಸಮೀಕರಣಕ್ಕೆ ಅನುಗುಣವಾಗಿ ಒಕ್ಕಲಿಗರಂಥ ಇನ್ನೊಂದು ಸಮಾಜದ ನಾಯಕರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡುವುದರಿಂದ ಪಕ್ಷಕ್ಕೆ ಹೆಚ್ಚಿನ ಅನುಕೂಲವಾಗಬಹುದು. ಮೇಲಾಗಿ ಯಡಿಯೂರಪ್ಪ ಅವರಿಗೆ ವಯಸ್ಸಾಗುತ್ತಿರುವುದರಿಂದ ಭವಿಷ್ಯದ ದೃಷ್ಟಿಯಿಂದ ಪರ್ಯಾಯ ನಾಯಕತ್ವವನ್ನು ಈಗಿನಿಂದಲೇ ಸಿದ್ಧಗೊಳಿಸಬೇಕು ಎಂಬ ಅಭಿಪ್ರಾಯವನ್ನು ರಾಜ್ಯದಲ್ಲಿನ ಸಂಘ ಪರಿವಾರದ ಮುಖಂಡರು ಬಿಜೆಪಿ ವರಿಷ್ಠರಿಗೆ ರವಾನಿಸಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಸಂಘ ಪರಿವಾರ ಸಲಹೆ ನೀಡಿರುವ ಮಾಹಿತಿ ದೊರೆತ ಬೆನ್ನಲ್ಲೇ ಯಡಿಯೂರಪ್ಪ ಅವರು ಸೋಮವಾರ ದಿಢೀರನೆ ಗುಜರಾತ್‌ನ ಅಹಮದಾಬಾದ್‌ಗೆ ತೆರಳಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರನ್ನು ಭೇಟಿ ಮಾಡಿ ಲೋಕಸಭಾ ಚುನಾವಣೆವರೆಗೂ ತಾವೇ ರಾಜ್ಯಾಧ್ಯಕ್ಷ ಹುದ್ದೆಯಲ್ಲಿ ಮುಂದುವರೆಯುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

ಇದೇ ಕಾರಣಕ್ಕಾಗಿಯೇ ಯಡಿಯೂರಪ್ಪ ಅವರು ಕಳೆದ ಎರಡು ದಿನಗಳಿಂದ ತಮ್ಮ ಆಪ್ತ ಶಾಸಕರು ಹಾಗೂ ಮುಖಂಡರನ್ನು ತಮ್ಮ ನಿವಾಸಕ್ಕೆ ಕರೆದು ಸಮಾಲೋಚನೆ ನಡೆಸಿದ್ದು, ಸಂದರ್ಭ ನಿರ್ಮಾಣವಾದಲ್ಲಿ ತಮ್ಮ ಪರವಾಗಿ ಧ್ವನಿ ಎತ್ತುವಂತೆ ಸೂಚನೆ ನೀಡಿದ್ದಾರೆ.

ಆದರೆ, ಪ್ರಸಕ್ತ ಸನ್ನಿವೇಶದಲ್ಲಿ ರಾಜ್ಯ ಬಿಜೆಪಿಯನ್ನು ಯಡಿಯೂರಪ್ಪ ಹೊರತುಪಡಿಸಿ ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗಬಲ್ಲ ನಾಯಕರು ಇದ್ದಾರೆಯೇ ಎಂಬ ಜಿಜ್ಞಾಸೆ ಪಕ್ಷದ ಹೈಕಮಾಂಡ್‌ಗೂ ಇದೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಜತೆಗೂಡಿ ಸಮ್ಮಿಶ್ರ ಸರ್ಕಾರ ರಚಿಸಿದ್ದಲ್ಲದೆ ಲೋಕಸಭಾ ಚುನಾವಣೆಯನ್ನೂ ಒಟ್ಟಾಗಿ ಎದುರಿಸಲು ನಿರ್ಧರಿಸಿದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರನ್ನು ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ಸೀಮಿತಗೊಳಿಸಿ ಪಕ್ಷದ ಚುಕ್ಕಾಣಿಯನ್ನು ಬೇರೊಬ್ಬರ ಕೈಗೆ ನೀಡಿದರೆ ನಷ್ಟಉಂಟಾಗಬಹುದೇನೊ ಎಂಊ ಆತಂಕವೂ ವರಿಷ್ಠರನ್ನು ಕಾಡುತ್ತಿದೆ.

ಈ ಕಾರಣಕ್ಕಾಗಿಯೇ ಸಂಘ ಪರಿವಾರದ ಸಲಹೆ ನಡುವೆಯೂ ಬಿಜೆಪಿ ಹೈಕಮಾಂಡ್‌ ಯಡಿಯೂರಪ್ಪ ಅವರನ್ನು ಬದಲಾಯಿಸುವಂಥ ಕಠಿಣ ನಿಲುವು ತೆಗೆದುಕೊಳ್ಳಲು ಹಿಂಜರಿಯುತ್ತಿದೆ. ಯಡಿಯೂರಪ್ಪ ಹೊರತುಪಡಿಸಿ ಪಕ್ಷ ನಡೆಸಬಲ್ಲ ಮತ್ತೊಬ್ಬ ಸಮರ್ಥ ನಾಯಕನ ಹೆಸರನ್ನು ಕೊಡಿ ಎಂದು ವರಿಷ್ಠರು ಸಂಘ ಪರಿವಾರದ ಮುಖಂಡರಿಗೆ ಹೇಳಿದ್ದಾರೆ ಎಂಬ ಮಾಹಿತಿಯೂ ಲಭಿಸಿದೆ.

ಈ ಬದಲಾವಣೆ ಮಾಡುವುದಿದ್ದರೆ ಆದಷ್ಟುಬೇಗನೆ ಮಾಡಬೇಕು. ಇಲ್ಲವಾದರೆ ಲೋಕಸಭಾ ಚುನಾವಣೆಯ ಸೀಟು ಹಂಚಿಕೆಯೂ ವಿಧಾನಸಭಾ ಚುನಾವಣೆಯಲ್ಲಿ ಆದಂತೆ ಗೋಜಲಾಗಲಿದೆ ಎಂದು ಸಂಘ ಪರಿವಾರ ಮುನ್ನೆಚ್ಚರಿಕೆ ನೀಡಿದೆ ಎಂದು ಮೂಲಗಳು ಹೇಳಿವೆ.

ಯಡಿಯೂರಪ್ಪ ಅವರಿಗೆ ಈಗ 75 ವರ್ಷ ವಯಸ್ಸು. ಮೊದಲಿನಂತೆ ಓಡಾಡುವುದು ಕಷ್ಟವಾಗಬಹುದು. ಹೀಗಾಗಿ, ಯಡಿಯೂರಪ್ಪ ಅವರು ಹಾಕಿಕೊಟ್ಟಮಾರ್ಗದಲ್ಲಿ ಪಕ್ಷವನ್ನು ಮುನ್ನಡೆಸಿಕೊಂಡು ಹೋಗುವ ಸಾಮರ್ಥ್ಯವನ್ನು ಮುಂದಿನ ಹಂತದ ನಾಯಕರಿಗೆ ನೀಡಬೇಕಾಗಿದೆ. ಅಂಥವರನ್ನು ಗುರುತಿಸಿ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟಲ್ಲಿ ಪಕ್ಷವನ್ನು ಮುನ್ನಡೆಸಿಕೊಂಡು ಹೋಗಬಹುದು. ಜಾತಿ ಸಮೀಕರಣದ ಜೊತೆಗೆ ಯುವಕರಿಗೆ ಆದ್ಯತೆ ಕೊಡುವುದು ಸೂಕ್ತ. ಹೊಸ ಮುಖವಾದರೂ ಆದೀತು ಎಂಬ ಶಿಫಾರಸ್ಸಿನ ರೂಪದ ಸಲಹೆಯನ್ನು ಸಂಘ ಪರಿವಾರದ ಮುಖಂಡರು ವರಿಷ್ಠರಿಗೆ ತಲುಪಿಸಿದ್ದಾರೆ ಎಂದು ತಿಳಿದು ಬಂದಿದೆ.

loader