ಜೈಪುರದಲ್ಲಿ ಜನವರಿ 27ರಂದು ಪದ್ಮಾವತಿ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಕರ್ಣಿ ಸೇನಾ ಎಂಬ ಸಂಘಟನೆಯ ಸದಸ್ಯರು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಮೇಲೆ ಹಲ್ಲೆ ನಡೆಸಿದ್ದರು.
ನವದೆಹಲಿ(ಜ.30): ಐತಿಹಾಸಿಕ ಪದ್ಮಾವತಿ ಚಿತ್ರವನ್ನು ನಿರ್ದೇಶಿಸುತ್ತಿರುವ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಮೇಲೆ ಶೂನಲ್ಲಿ ಬಾರಿಸಿದರೆ 10 ಸಾವಿರ ರೂಪಾಯಿ ನೀಡುವುದಾಗಿ ಮಧ್ಯಪ್ರದೇಶದ ಆಡಳಿತರೂಢ ಬಿಜೆಪಿ ಪಕ್ಷದ ನಾಯಕ ಅಖಿಲೇಶ್ ಖಂಡೇವಾಲ್ ಘೋಷಿಸಿದ್ದಾರೆ.
ಹೋಶಂಗಬಾದ್ ನಗರ ಸಭೆಯ ಅಧ್ಯಕ್ಷರಾಗಿರುವ ಖಂಡೇವಾಲ್, ಅವರು ಇಂತಹ ಚಿತ್ರಗಳನ್ನು ನಿರ್ಮಿಸುವ ಮೂಲಕ ಜನರಲ್ಲಿ ತಪ್ಪುಕಲ್ಪನೆ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಇದನ್ನೆಲ್ಲಾ ನೋಡಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ. ಐತಿಹಾಸಿಕ ಘಟನೆಗಳ ಬಗ್ಗೆ ತಪ್ಪುಕಲ್ಪನೆ ಬಿಂಬಿಸಲು ಹೊರಟಿರುವ ಶಕ್ತಿಗಳನ್ನು ತಡೆಯುವುದು ನಮ್ಮ ಹೊಣೆಗಾರಿಕೆ ಎಂದು ಭಾವಿಸಿದ್ದೇನೆಂದು ಹೇಳಿದ್ದಾರೆ.
ಜೈಪುರದಲ್ಲಿ ಜನವರಿ 27ರಂದು ಪದ್ಮಾವತಿ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಕರ್ಣಿ ಸೇನಾ ಎಂಬ ಸಂಘಟನೆಯ ಸದಸ್ಯರು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಮೇಲೆ ಹಲ್ಲೆ ನಡೆಸಿದ್ದರು. ಇದಾದ ಬೆನ್ನಲ್ಲೇ ಬಿಜೆಪಿ ಮುಖಂಡನ ಈ ಹೇಳಿಕೆ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.
ಬನ್ಸಾಲಿ ಮೇಲಿನ ಹಲ್ಲೆಯನ್ನು ಬಾಲಿವುಡ್ ಕಲಾವಿದರು ತೀವ್ರವಾಗಿ ಖಂಡಿಸಿದ್ದರು.
