ಪರಾರಿಯಾಗಿದ್ದ ಮೂವರನ್ನು ಹಿಡಿಯಲು ಬಾಣಸವಾಡಿ ಎಸಿಪಿ ರವಿಕುಮಾರ್ ನೇತೃತ್ವದ ಪೊಲೀಸ್ ತಂಡವೊಂದನ್ನು ರಚಿಸಲಾಗಿತ್ತು. ವೇಲೂರಿನಲ್ಲಿ ಕಾಣಿಸಿಕೊಂಡ ನಾಗನನ್ನು ಹಿಡಿಯಲು ಪೊಲೀಸರು ಮುಂದಾದಾಗ ದೊಡ್ಡ ಚೇಸಿಂಗ್ ದೃಶ್ಯವೇ ನಿರ್ಮಾಣಗೊಂಡಿತ್ತು. ಸುಮಾರು ಒಂದೂವರೆ ಕಿ.ಮೀ. ದೂರದಷ್ಟು ಚೇಸ್ ಮಾಡಿ ಪೊಲೀಸರು ನಾಗನನ್ನು ಹಿಡಿದಿದ್ದಾರೆ.
ಬೆಂಗಳೂರು(ಮೇ 11): ಷರತ್ತಿನ ಮೇಲೆ ಶರಣಾಗಲು ಮಾಸ್ಟರ್ ಪ್ಲಾನ್ ಮಾಡಿದ್ದ ರೌಡಿಶೀಟರ್ ನಾಗನನ್ನು ಪೊಲೀಸರೇ ಖುದ್ದು ಅರೆಸ್ಟ್ ಮಾಡಿದ್ದಾರೆ. ತಮಿಳುನಾಡಿನ ವೇಲೂರಿನಲ್ಲಿ ನಾಗ ಹಾಗೂ ಆತನ ಇಬ್ಬರು ಮಕ್ಕಳನ್ನು ಕರ್ನಾಟಕ ಪೊಲೀಸರ ತಂಡವು ಬಂಧಿಸಿದೆ. ಫೋನ್ ಮಾಡಲೆಂದು ಮುಖ್ಯರಸ್ತೆಗೆ ಬಂದಿದ್ದ ನಾಗ, ಶಾಸ್ತ್ರಿ ಮತ್ತು ಗಾಂಧಿಯನ್ನು ಪೊಲೀಸರು ಬಂಧಿಸಿದ್ದಾರೆ.
ಏಪ್ರಿಲ್ 14ರಿಂದ ರೌಡಿ ನಾಗ ತಲೆತಪ್ಪಿಸಿಕೊಂಡಿದ್ದ. ನಾಗನ ಜೊತೆ ಆತನ ಇಬ್ಬರೂ ಮಕ್ಕಳೂ ಪರಾರಿಯಾಗಿದ್ದರು. ನಾಗ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ಕೂಡ ವಜಾ ಆಗಿ ನಾಗನ ಬಂಧನಕ್ಕೆ ಅರೆಸ್ಟ್ ವಾರೆಂಟ್ ಹೊರಡಿಸಲಾಗಿತ್ತು.
ಪರಾರಿಯಾಗಿದ್ದ ಮೂವರನ್ನು ಹಿಡಿಯಲು ಬಾಣಸವಾಡಿ ಎಸಿಪಿ ರವಿಕುಮಾರ್ ನೇತೃತ್ವದ ಪೊಲೀಸ್ ತಂಡವೊಂದನ್ನು ರಚಿಸಲಾಗಿತ್ತು. ವೇಲೂರಿನಲ್ಲಿ ಕಾಣಿಸಿಕೊಂಡ ನಾಗನನ್ನು ಹಿಡಿಯಲು ಪೊಲೀಸರು ಮುಂದಾದಾಗ ದೊಡ್ಡ ಚೇಸಿಂಗ್ ದೃಶ್ಯವೇ ನಿರ್ಮಾಣಗೊಂಡಿತ್ತು. ಆ ಮೂವರು ಮಾರುತಿ ವ್ಯಾನ್'ನಲ್ಲಿರುವುದನ್ನು ಕಂಡ ಪೊಲೀಸರು ಸಮೀಪಕ್ಕೆ ಹೋಗುತ್ತಿದ್ದಂತೆಯೇ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಸುಮಾರು ಒಂದೂವರೆ ಕಿ.ಮೀ. ದೂರದಷ್ಟು ವ್ಯಾನನ್ನು ಚೇಸ್ ಮಾಡಿ ಪೊಲೀಸರು ನಾಗನನ್ನು ಹಿಡಿದಿದ್ದಾರೆ.
ನಾಗ ಪರಾರಿಯಾಗಿದ್ದು ಯಾಕೆ?
ಏಪ್ರಿಲ್ 14ರಂದು ಅಧಿಕಾರಿಗಳು ಬೆಂಗಳೂರಿನ ಶ್ರೀರಾಮಪುರದಲ್ಲಿರುವ ನಾಗನ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದಾಗ ಸುಮಾರು 14.8 ಕೋಟಿ ರೂ ಮೌಲ್ಯದಷ್ಟು ನಿಷೇಧಿತ ಹಳೆಯ ನೋಟುಗಳು ಸಿಕ್ಕಿದ್ದವು. ಆದರೆ, ನಾಗ ತಪ್ಪಿಸಿಕೊಂಡಿದ್ದ. ಅಪಹರಣ ಮತ್ತು ಸುಲಿಗೆ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದ ನಾಗರಾಜ್ ಇದೇ ಮಂಗಳವಾರದಂದು ತಾನಾಗೇ ಶರಣಾಗಲು ನಿರ್ಧರಿಸಿದ್ದನೆಂಬ ಮಾತು ಕೇಳಿಬರುತ್ತಿತ್ತು. ವಿವಿಧ ಷರತ್ತುಗಳೊಂದಿಗೆ ಆತ ಶರಣಾಗಬಯಸಿದ್ದನೆನ್ನಲಾಗಿದೆ. ಜ್ಯೋತಿಷಿಯೊಬ್ಬರ ಸಲಹೆ ಮೇರೆ ಮಂಗಳವಾರ ನಾಗ ಶರಣಾಗಲು ನಿರ್ಧರಿಸಿದ್ದನೆಂಬ ಮಾತೂ ಕೇಳಿಬರುತ್ತಿದೆ.
ಇದೇ ವೇಳೆ, ಪೊಲೀಸರು ತನಗೆ ಕಿರುಕುಳ ಕೊಡುತ್ತಾರೆಂದು ಆರೋಪಿಸಿ ತಾನು ಮಾತನಾಡಿರುವ ವಿಡಿಯೋಗಳನ್ನೂ ನಾಗ ಬಿಡುಗಡೆ ಮಾಡಿದ್ದು ಮಾಧ್ಯಮಗಳಲ್ಲಿ ಪ್ರಸಾರವಾಗಿದೆ.
