ನವದೆಹಲಿ(ಮೇ.12): ಬಾಲಾಕೋಟ್ ವಾಯುದಾಳಿಯ ದಿನ ಮೋಡ ಮತ್ತು ಭಾರೀ ಮಳೆ ಸುರಿದ ಕಾರಣ, ಅದರ ಲಾಭ ಪಡೆದು ಪಾಕಿಸ್ತಾನಿ ರೆಡಾರ್‌ನಿಂದ ತಪ್ಪಿಸಿಕೊಂಡು ದಾಳಿ ನಡೆಸಲಾಗಿತ್ತು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಬಾಲಾಕೋಟ್ ವಾಯುದಾಳಿಯ ಮಾಹಿತಿ ಬಿಚ್ಚಿಟ್ಟ ಮೋದಿ, ಫೆ.26ರಂದು ಮೋಡ ಕವಿದ ವಾತಾವರಣ ಮತ್ತು ಭಾರೀ ಮಳೆಯ ಸಂಭವ ಎದುರಾಗಿತ್ತು. ಹೀಗಾಗಿ ದಾಳಿಯ ಯೋಜನೆಯನ್ನು ಮುಂದೂಡಲು ತಜ್ಞರು ಬಯಸಿದ್ದರು. ಆದರೆ ನಾನು ವಾತಾವರಣದ ಲಾಭ ಪಡೆದು ಪಾಕಿಸ್ತಾನಿ ರೆಡಾರ್‌ನಿಂದ ಕಣ್ತಪ್ಪಿಸಿಕೊಂಡು ದಾಳಿ ನಡೆಸುವ ನಿರ್ಧಾರಕ್ಕೆ ಬಂದಿದ್ದಾಗಿ ಹೇಳಿದ್ದಾರೆ.

ಆದರೆ ಮೋದಿ ಅವರ ವಾದವನ್ನು ಕುಹುಕವಾಡಿರುವ ಪ್ರತಿಪಕ್ಷಗಳು, ಅತ್ಯಂತ ರಹಸ್ಯವಾಗಿಡಬೇಕಿದ್ದ ಕಾರ್ಯಾಚರಣೆಯ ಮಾಹಿತಿಯನ್ನು ಮೋದಿ ಜಗಜ್ಜಾಹೀರುಗೊಳಿಸಿದ್ದಾರೆ ಎಂದು ಕಿಡಿಕಾರಿವೆ. ಅಲ್ಲದೇ ಮೋಡ, ಮಳೆಯ ಮೋದಿ ಪ್ಲ್ಯಾನ್ ಕುರಿತು ಕುಹುಕವಾಡಿವೆ.

ಬಿಜೆಪಿ ಈ ಮೊದಲು ಮೋದಿ ಸಂದರ್ಶನವನ್ನು ಟ್ವಿಟ್ ಮಾಡಿತ್ತು. ಆದರೆ ಈ ಕುರಿತು ಪ್ರಶ್ನೆಗಳೆದ್ದ ಮೇಲೆ ಟ್ವಿಟ್ ಡಿಲೀಟ್ ಮಾಡಿತ್ತಾದರೂ, ಪ್ರತಿಪಕ್ಷಗಳು ಸ್ಕ್ರೀನ್ ಶಾಟ್ ಮೂಲಕ ಬಿಜೆಪಿ ವಿರುದ್ಧ ಮುಗಿ ಬಿದ್ದಿವೆ.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ