ಬೆಂಗಳೂರು :  ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿಷಯ ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿರುವ ಹೊತ್ತಿನಲ್ಲೇ,  ರಾಮಮಂದಿರ ನಿರ್ಮಾಣದ ಪರ ಕರ್ನಾಟಕದ ಕಾಂಗ್ರೆಸ್ ನಾಯಕ, ಶಾಸಕ ರೋಷನ್ ಬೇಗ್ ಬ್ಯಾಟಿಂಗ್ ಮಾಡಿದ್ದಾರೆ. ಜೊತೆಗೆ ಭಾರತದಲ್ಲಿ ರಾಮಮಂದಿರ ನಿರ್ಮಿಸದೇ, ಪಾಕಿಸ್ತಾನದಲ್ಲಿ ನಿರ್ಮಿಸಲಾದೀತೇ ಎಂದು ಪ್ರಶ್ನಿಸಿದ್ದಾರೆ. 

ಈ ಬಗ್ಗೆ ಮಾತನಾಡಿದ ಅವರು, ಚುನಾವಣೆ ಬಂದಾಗಲೆಲ್ಲಾ ಬಿಜೆಪಿಗೆ ರಾಮಮಂದಿರ ವಿಷಯ ನೆನಪಾಗುತ್ತದೆ. ಕಳೆದ ನಾಲ್ಕೂವರೆ ವರ್ಷಗಳಿಂದ ಅದು ಸುಮ್ಮನಿತ್ತು. ಇದೀಗ ಪ್ರಕರಣ ಕೋರ್ಟ್ ಮೆಟ್ಟಿಲೇರಿದಾಗ ಅದು ಸುಗ್ರೀವಾಜ್ಞೆಯ ಮಾತುಗಳನ್ನು ಆಡುತ್ತಿದೆ ಎಂದು ಕಿಡಿಕಾರಿದ್ದಾರೆ. ಚುನಾವಣೆ ಬಂದಾಗ ಮಾತ್ರ ರಾಮಮಂದಿರ ವಿಷಯವನ್ನು ಬಿಜೆಪಿ ಪ್ರಸ್ತಾಪಿಸುವುದು ಬಿಡಬೇಕು.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ನನ್ನ ಪೂರ್ಣ ಬೆಂಬಲವಿದೆ. ಇದಕ್ಕೆ ಕರ್ನಾಟಕದ ಮುಸ್ಲಿಮರದ್ದೂ ವಿರೋಧವಿಲ್ಲ. ಹಿಂದೂ ಸೋದರರ ಭಾವನೆಗಳನ್ನು ನಾವು ಗೌರವಿಸುತ್ತೇವೆ. ಈ ವಿಷಯದಲ್ಲಿ ಬಿಜೆಪಿ ರಾಜಕೀಯ ಬಿಟ್ಟು, ಮಂದಿರ ನಿರ್ಮಾಣ ವಿಷಯವನ್ನು ಸಾಧು ಸಂತರಿಗೆ ಬಿಟ್ಟಿದ್ದರೆ ವಿಷಯ ಯಾವಾಗಲೋ ಇತ್ಯರ್ಥವಾಗಿ ಹೋಗುತ್ತಿತ್ತು ಎಂದು ಬೇಗ್ ಹೇಳಿದ್ದಾರೆ.