ರಾಜೀನಾಮೆ ನೀಡಿ ನಡೆದಿರುವ ಕಾಂಗ್ರೆಸ್ ನಾಯಕರೋರ್ವರು ಬಿ ಎಸ್ ಯಡಿಯೂರಪ್ಪ ಆಪ್ತನ ಜೊತೆ ಪರಾರಿಯಾಗಲು ಯತ್ನಿಸಿದ್ದರೆನ್ನುವ ಆರೋಪ ಕೇಳಿ ಬಂದಿದೆ. 

ಬೆಂಗಳೂರು [ಜು.16] : ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಆಪ್ತ ಸಹಾಯಕ ಎಸ್‌.ಎನ್‌.ಸಂತೋಷ್‌ ಜೊತೆ ಪರಾರಿಯಾಗಲು ಯತ್ನಿಸಿದ್ದ ಶಾಸಕ ರೋಷನ್‌ ಬೇಗ್‌ ಅವರನ್ನು ಐಎಂಎ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

"

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಬೈಗೆ ಹೋಗಲು ರೋಷನ್‌ ಬೇಗ್‌ ಮುಂದಾಗಿದ್ದರು. ವಿಚಾರಣೆಗೆ ಎದುರಿಸುವ ಬದಲು ಸಂತೋಷ್‌ ಜತೆ ಮುಂಬೈಗೆ ಪರಾರಿಯಾಗಲು ಯತ್ನಿಸಿದರು. ಈ ವೇಳೆ ಮಾಜಿ ಶಾಸಕ ಯೋಗೇಶ್ವರ್‌ ಸಹ ಉಪಸ್ಥಿತರಿದ್ದರು. ಮಾಜಿ ಸಚಿವರು ಪರಾರಿಯಾಗಲು ಬಿಜೆಪಿ ಸಹಕರಿಸಿರುವುದು ಇದರಿಂದ ಗೊತ್ತಾಗುತ್ತದೆ. 

ರೋಷನ್‌ ಬೇಗ್‌ ಐಎಂಎ ಪ್ರಕರಣದ ವಿಚಾರಣೆ ಎದುರಿಸುತ್ತಿದ್ದಾರೆ. ಆದರೂ ಅವರ ಪರಾರಿಯಾಗಲು ಬಿಜೆಪಿ ಸಹಕರಿಸಿದೆ ಎಂದು ಟ್ವೀಟರ್‌ನಲ್ಲಿ ಹೇಳಿದ್ದಾರೆ. ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸಿರುವುದು ಇದರಿಂದ ಸಾಬೀತಾಗಿದೆ. ಕುದುರೆ ವ್ಯಾಪಾರ ಮಾಡಿ ಸರ್ಕಾರವನ್ನು ಪತನಗೊಳಿಸಲು ಬಿಜೆಪಿ ಹಲವು ಪ್ರಯತ್ನ ಮಾಡುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದಿದ್ದಾರೆ.