ನವದೆಹಲಿ[ಏ.17]: ಉತ್ತರ ಪ್ರದೇಶ ಮಾಜಿ ಸಿಎಂ ಎನ್‌.ಡಿ ತಿವಾರಿ ಅವರೇ ನನ್ನ ತಂದೆ ಎಂಬುದನ್ನು ಸಾಬೀತುಪಡಿಸಲು ಆರು ವರ್ಷಗಳ ಕಾಲ ಕಾನೂನು ಹೋರಾಟ ನಡೆಸಿದ್ದ ರೋಹಿತ್‌ ಶೇಖರ್‌ ತಿವಾರಿ ಅವರು ಅನುಮಾನಾಸ್ಪದ ರೀತಿಯಲ್ಲಿ ಅಸುನೀಗಿದ್ದಾರೆ.

ದಕ್ಷಿಣ ದೆಹಲಿಯ ಡಿಫೆನ್ಸ್‌ ಕಾಲೋನಿಯಲ್ಲಿ ವಾಸವಾಗಿದ್ದ ರೋಹಿತ್‌ ತಿವಾರಿ ಅವರ ಮೂಗಿನಲ್ಲಿ ರಕ್ತ ಸುರಿಯುತ್ತಿತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ 5 ಗಂಟೆಗೆ ರೋಹಿತ್‌ ತಿವಾರಿ ಅವರನ್ನು ಆ್ಯಂಬುಲೆನ್ಸ್‌ ಮೂಲಕ ಮ್ಯಾಕ್ಸ್‌ ಆಸ್ಪತ್ರೆಗೆ ಕರೆತರಲಾಯಿತು. ಆದರೆ, ಅಷ್ಟೊತ್ತಿಗಾಗಲೇ ರೋಹಿತ್‌ ಕೊನೆಯುಸಿರೆಳೆದಿದ್ದರು ಎಂದು ವೈದ್ಯರು ತಿಳಿಸಿದ್ದಾರೆ ಎಂದು ಡಿಸಿಪಿ ವಿಜಯ್‌ ಕುಮಾರ್‌ ಅವರು ಮಾಹಿತಿ ನೀಡಿದರು.

ಏತನ್ಮಧ್ಯೆ, ಅನಾರೋಗ್ಯದಿಂದಾಗಿ ಮ್ಯಾಕ್ಸ್‌ ಆಸ್ಪತ್ರೆಯಲ್ಲೇ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ರೋಹಿತ್‌ ತಿವಾರಿ ಅವರ ತಾಯಿಗೂ ಪುತ್ರ ಸಾವನ್ನಪ್ಪಿರುವ ಬಗ್ಗೆ ಮಾಹಿತಿ ನೀಡಲಾಗಿದೆ. ಉಜ್ವಲಾ ಮತ್ತು ತಿವಾರಿ ನಡುವಿನ ಸಂಬಂಧದಲ್ಲಿ ಶೇಖರ್‌ ಜನಿಸಿದ್ದರು. ಆದರೆ ತಿವಾರಿ ಇದನ್ನು ಬಹಿರಂಗವಾಗಿ ಒಪ್ಪಿರಲಿಲ್ಲ. ಈ ಕುರಿತು 2008ರಲ್ಲಿ ಶೇಖರ್‌ ಕಾನೂನು ಹೋರಾಟ ಆರಂಭಿಸಿದ್ದರು. ಈ ಹಿನ್ನೆಲೆಯಲ್ಲಿ ಶೇಖರ್‌ ಹೇಳಿಕೆ ಸತ್ಯಾಸತ್ಯತೆ ಪರೀಕ್ಷೆಗಾಗಿ ನ್ಯಾಯಾಲಯ ಡಿಎನ್‌ಎ ಪರೀಕ್ಷೆಗೆ ಆದೇಶಿಸಿತ್ತು.

2012ರಲ್ಲಿ ಪ್ರಕಟವಾದ ಡಿಎನ್‌ಎ ಪರೀಕ್ಷೆ ಅನ್ವಯ, ಶೇಖರ್‌ ಅವರು ಎನ್‌.ಡಿ.ತಿವಾರಿ ಅವರ ಪುತ್ರ ಎಂದು ಸಾಬೀತಾಗಿತ್ತು. ಬಳಿಕ ಇದನ್ನು ಸ್ವತಃ ತಿವಾರಿ ಕೂಡಾ ಒಪ್ಪಿದ್ದರು. ಅಲ್ಲದೆ 2014ರಲ್ಲಿ ಉಜ್ವಲಾ ಅವರನ್ನು ತಿವಾರಿ ವಿವಾಹವಾಗಿದ್ದರು.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.