ನವದೆಹಲಿ(ಜು.13): ಪಕ್ಷ ನೀಡುವ ಯಾವುದೇ ಹುದ್ದೆಗಿಂತ ತಮಗೆ ದೇಶಸೇವೆ ಮುಖ್ಯ ಎಂಬ ರಾಹುಲ್ ಗಾಂಧಿ ಹೇಳಿಕೆಯನ್ನು ರಾಬರ್ಟ್ ವಾದ್ರಾ ಮೆಚ್ಚಿಕೊಂಡಿದ್ದಾರೆ.

ಈ ಕುರಿತು ಫೇಸ್‌ಬುಕ್‌ ಪೋಸ್ಟ್ ಮಾಡಿರುವ ರಾಬರ್ಟ್, ರಾಹುಲ್ ಅವರಿಂದ ತಾವು ಬಹಳಷ್ಟು ಕಲಿತಿರುವುದಾಗಿ ಬರೆದುಕೊಂಡಿದ್ದಾರೆ. ರಾಹುಲ್ ಅವರಲ್ಲಿ ಅದ್ಭುತ ಶಕ್ತಿ ಮತ್ತು ಧೈರ್ಯ ಇದ್ದು, ಶೇ.65ರಷ್ಟು ಯುವ ಸಮುದಾಯ ಹೊಂದಿರುವ ಭಾರತವನ್ನು ರಾಹುಲ್ ಪ್ರತಿನಿಧಿಸುತ್ತಾರೆ ಎಂದು ವಾದ್ರಾ ಅಭಿಪ್ರಾಯಪಟ್ಟಿದ್ದಾರೆ.

ಚುನಾವಣೆ ಸೋಲಿನ ಬಳಿಕ ಕಾಂಗ್ರೆಸ್ ಅಧ್ಯಕ್ಷ ಪಟ್ಟ ತೊರೆದಿದ್ದ ರಾಹುಲ್ ಗಾಂಧಿ, ಪಕ್ಷದ ಹುದ್ದೆ ನಿಭಾಯಿಸುವುದಕ್ಕಿಂತ ದೇಶಸೇವೆ ಮಾಡುವುದು ತಮ್ಮ ಸದ್ಯದ ಆಯ್ಕೆ ಎಂದು ತಿಳಿಸಿದ್ದರು.

ಜನರೊಂದದಿಗೆ ಬೆರೆತು ಪಕ್ಷ ಸಂಘಟನೆಯಲ್ಲಿ ನಿರತರಾಗುವುದು ಸದ್ಯ ತಮ್ಮ ಮುಂದಿರುವ ಗುರಿ ಎಂದಿರುವ ರಾಹುಲ್, ಪರಿಶ್ರಮದಿಂದ ಉನ್ನತ ಸ್ಥಾನ ಪಡೆಯಲು ಬಯಸುವ ಯುವ ಸಮುದಾಯಕ್ಕೆ ಆದರ್ಶ ಎಂದು ರಾಬರ್ಟ್ ಹೇಳಿದ್ದಾರೆ.