ಲೋಕೋಪಯೋಗಿ ಇಲಾಖೆಯಲ್ಲಿ ನಡೆಯುವ ಟೆಂಡರ್ ಅಕ್ರಮಗಳು ಅದೆಷ್ಟೋ. ಇದೀಗ ಮತ್ತೊಂದು ಬಹುಕೋಟಿ ಟೆಂಡರ್ ಗೋಲ್ಮಾಲ್ ಪ್ರಕರಣ ಲೋಕೋಪಯೋಗಿ ಇಲಾಖೆಯಲ್ಲಿ ನಡೆದಿದೆ. ಹೆದ್ದಾರಿ ರಸ್ತೆ ಅಭಿವೃದ್ಧಿಯ 127 ಕಾಮಗಾರಿಗಳಿಗೆ ಸುಳ್ಳು ದಾಖಲೆಗಳನ್ನು ಕೊಟ್ಟು ಟೆಂಡರ್ ಹಂಚಿಕೆ ಮಾಡಿರುವ ಪ್ರಕರಣ ಇದಾಗಿದೆ. ಗುತ್ತಿಗೆದಾರರು ಸಲ್ಲಿಸಿರುವ ನಕಲಿ ದಾಖಲೆಗಳು ಎಕ್ಸ್ಕ್ಲೂಸಿವ್ ಆಗಿ ಸುವರ್ಣನ್ಯೂಸ್'ಗೆ ಸಿಕ್ಕಿವೆ.
ಬೆಂಗಳೂರು(ನ.25): ಲೋಕೋಪಯೋಗಿ ಇಲಾಖೆಯಲ್ಲಿ ನಡೆಯುವ ಟೆಂಡರ್ ಅಕ್ರಮಗಳು ಅದೆಷ್ಟೋ. ಇದೀಗ ಮತ್ತೊಂದು ಬಹುಕೋಟಿ ಟೆಂಡರ್ ಗೋಲ್ಮಾಲ್ ಪ್ರಕರಣ ಲೋಕೋಪಯೋಗಿ ಇಲಾಖೆಯಲ್ಲಿ ನಡೆದಿದೆ. ಹೆದ್ದಾರಿ ರಸ್ತೆ ಅಭಿವೃದ್ಧಿಯ 127 ಕಾಮಗಾರಿಗಳಿಗೆ ಸುಳ್ಳು ದಾಖಲೆಗಳನ್ನು ಕೊಟ್ಟು ಟೆಂಡರ್ ಹಂಚಿಕೆ ಮಾಡಿರುವ ಪ್ರಕರಣ ಇದಾಗಿದೆ. ಗುತ್ತಿಗೆದಾರರು ಸಲ್ಲಿಸಿರುವ ನಕಲಿ ದಾಖಲೆಗಳು ಎಕ್ಸ್ಕ್ಲೂಸಿವ್ ಆಗಿ ಸುವರ್ಣನ್ಯೂಸ್'ಗೆ ಸಿಕ್ಕಿವೆ.
ಲೋಕೋಪಯೋಗಿಯಲ್ಲಿ ಬಹುಕೋಟಿ ಟೆಂಡರ್ ಅಕ್ರಮ?
ಲೋಕೋಪಯೋಗಿ ಇಲಾಖೆ ಅಂದರೆ ಅದು ಟೆಂಡರ್'ಗಳ ಗೂಡು. ಪ್ರತಿನಿತ್ಯ ಹತ್ತು ಹಲವು ಟೆಂಡರ್'ಗಳನ್ನು ಅಲ್ಲಿ ಗುತ್ತಿಗೆದಾರರಿಗೆ ವಹಿಸುವ ಕೆಲಸ ಎಡಬಿಡದೇ ನಡೆದೇ ಇರುತ್ತದೆ. ಈ ಪ್ರಕ್ರಿಯೆಯಲ್ಲಿ ಅಕ್ರಮಗಳೂ ಸದ್ದಿಲ್ಲದೇ ನುಸುಳುತ್ತಿವೆ. ಇದೀಗ ಲೋಕೋಪಯೋಗಿ ಇಲಾಖೆಯಲ್ಲಿ ಬಹುಕೋಟಿ ಟೆಂಡರ್ ಅಕ್ರಮವೊಂದು ನಡೆದಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಇತ್ತೀಚೆಗಷ್ಟೇರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಹಂತ-3 ರಡಿ ಮೂರೂವರೆ ಸಾವಿರ ಕೋಟಿ ರೂ ಮೌಲ್ಯದ 127 ಪ್ಯಾಕೇಜ್ಗಳಲ್ಲಿ ಹೆದ್ದಾರಿ ಅಭಿವೃದ್ಧಿಗೆ ಟೆಂಡರ್ ಕರೆಯಲಾಗಿತ್ತು. ಆದ್ರೆ ಈ ಟೆಂಡರ್'ಗಳ ಪೈಕಿ ಹಲವು ಟೆಂಡರ್'ಗಳಿಗೆ ಗುತ್ತಿಗೆದಾರರು ನಕಲಿ ದಾಖಲೆಗಳನ್ನು ಸಲ್ಲಿಸಿ ಅಕ್ರಮವಾಗಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಟೆಂಡರ್'ಗಳನ್ನು ಕೆಲವೇ ಗುತ್ತಿಗೆದಾರರ ಜೊತೆ ಮೊದಲೇ ಸಂಧಾನ ಮಾಡಿಕೊಂಡು ಹಂಚಿಕೆ ಮಾಡುತ್ತಿರುವ ಆರೋಪವೂ ಇದೆ. ಈ ಅವ್ಯವಹಾರದಲ್ಲಿ ಗುತ್ತಿಗೆದಾರರಷ್ಟೇ ಅಲ್ಲದೇ ಇಲಾಖೆ ಅಧಿಕಾರಿಗಳು ಹಾಗೂ ಲೋಕೋಪಯೋಗಿ ಇಲಾಖೆ ಸಚಿವ ಡಾ.ಎಚ್.ಸಿ.ಮಹಾದೇವಪ್ಪರವರ ವಿಶೇಷ ಕಾರ್ಯದರ್ಶಿಯೊಬ್ಬರು ಶಾಮೀಲಾಗಿದ್ದಾರೆ ಎನ್ನುವ ಆರೋಪವೂ ಬಲವಾಗಿ ಕೇಳಿ ಬರುತ್ತಿದೆ. ಈ ಅಕ್ರಮದ ಬಗ್ಗೆ ಸುವರ್ಣನ್ಯೂಸ್ಗೆ ಆರ್ಟಿಐ ದಾಖಲೆಗಳು ಸಿಕ್ಕಿವೆ.
ಅಕ್ರಮ ನಡೆದಿದ್ದು ಹೀಗೆ
ಹೆದ್ದಾರಿಗಳ ಅಭಿವೃದ್ಧಿ ಕಾಮಗಾರಿಗಳಿಗೆ ಕರೆದಿರುವ ಟೆಂಡರ್ನಲ್ಲಿ ಒಂದಷ್ಟು ಷರತ್ತುಗಳನ್ನು ಹಾಕಲಾಗಿತ್ತು. ಆದರೆ ಈ ಷರತ್ತುಗಳಿಗೆ ಕೆಲವು ಗುತ್ತಿಗೆದಾರರು ನಕಲಿ ದಾಖಲೆ ಸೃಷ್ಟಿಸಿ ಸಲ್ಲಿಸಿದ್ದಾರೆ ಅನ್ನೋ ಆರೋಪ ಇದೆ. ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ಅಹರ್ತೆ ಸಿಗಬೇಕಾದರೆ, ಗುತ್ತಿಗೆದಾರರು ಈ ಹಿಂದೆ ಕನಿಷ್ಟ ಎರಡು ವರ್ಷದ ಕಾಮಗಾರಿಗಳಲ್ಲಿ ಇಲಾಖೆ ನಿಗದಿ ಪಡಿಸಿದ ಇಂತಿಷ್ಟು ಕೋಟಿ ಹಣ ಟರ್ನ್ಓವರ್ ನಡೆಸಿರುವುದಕ್ಕೆ ಪ್ರಮಾಣಪತ್ರ ಸಲ್ಲಿಸಬೇಕು ಅನ್ನೋ ಷರತ್ತು ಇದೆ. ಆದ್ರೆ ಸುವರ್ಣನ್ಯೂಸ್ಗೆ ಸಿಕ್ಕಿರುವ ದಾಖಲೆಗಳ ಪ್ರಕಾರ ಕೆಲ ಗುತ್ತಿಗೆದಾರರು ತಮ್ಮ ಹಿಂದಿನ ಕಾಮಗಾರಿಗಳ ಟರ್ನ್ಓವರ್ ಮೊತ್ತದ ಬಗ್ಗೆ ಸುಳ್ಳು ಮಾಹಿತಿ ನಮೂದಿಸಿರುವುದು ಪತ್ತೆಯಾಗಿದೆ. ಅಲ್ಲದೇ ಯಂತ್ರೋಪಕರಣಗಳ ಮಾಲೀಕತ್ವವನ್ನು ಸ್ವತಂ ಗುತ್ತಿಗೆದಾರರೇ ಹೊಂದಿರಬೇಕೆಂಬ ಷರತ್ತನ್ನೂ ಪಾಲಿಸಿಲ್ಲ. ಕಾಮಗಾರಿಗೆ ಅಗತ್ಯ ಇರುವ ಯಂತ್ರೋಪಕರಣಗಳ ಮಾಲೀಕತ್ವಕ್ಕೆ ಕೆಲವು ಗುತ್ತಿಗೆದಾರರು ಆರ್ಟಿಒ ಕೊಟ್ಟಿರುವ ವಾಹನಗಳ ದಾಖಲೆ ಸಲ್ಲಿಸದೇ ಕೇವಲ ಸ್ಟ್ಯಾಂಪ್ ಪೇಪರ್ ದಾಖಲೆ ಮಾತ್ರ ಸಲ್ಲಿಸಿರೋದು ಅನುಮಾನ ಹುಟ್ಟಿಸಿದೆ.
ಇನ್ನು ಕೆಲ ತಿಂಗಳ ಹಿಂದೆಯೇ ಈ ಟೆಂಡರ್ ಗೋಲ್ಮಾಲ್ ಬಗ್ಗೆ ಕೆಲವರು ಸಿಎಂ ಸಿದ್ದರಾಮಯ್ಯ ಗಮನಕ್ಕೂ ತರಲಾಗಿತ್ತು. ಆದರೆ ಮುಖ್ಯಮಂತ್ರಿಗಳು ಗಮನ ನೀಡ್ಲಿಲ್ಲ ಎನ್ನಲಾಗಿದೆ. ಇತ್ತಿಚೆಗಷ್ಟೇ ಮಂಡ್ಯ ಮೂಲದ ಗುತ್ತಿಗೆದಾರರು ಸಚಿವ ಎಚ್.ಸಿ.ಮಹಾದೇವಪ್ಪ ವಿರುದ್ಧ ಬೇರೊಂದು ಟೆಂಡರ್ ಅಕ್ರಮ ಪ್ರಕರಣದಲ್ಲಿ ಎಸಿಬಿಗೆ ದೂರು ಕೊಟ್ಟು ಅದರ ತನಿಖೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಲೋಕೋಪಯೋಗಿ ಇಲಾಖೆಯಲ್ಲಿ ಮತ್ತೊಂದು ಬಹುಕೋಟಿ ಟೆಂಡರ್ ಅಕ್ರಮ ಸದ್ದು ಮಾಡುತ್ತಿರೋದು ಸರ್ಕಾರಕ್ಕೆ ಮುಜುಗರ ತಂದಿದೆ.
