ರೂಪ ಕುಮಾರ್​ ದತ್ತ  ರಾಜ್ಯದ ಮುಂದಿನ ಪೊಲೀಸ್ ಮಹಾನಿರ್ದೇಶಕರಾಗಲಿದ್ದಾರೆ. ಈ ಸಂಬಂಧ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಶಿಫಾರಸು ಕೂಡಾ ರವಾನೆಯಾಗಿದೆ. ಬಹುತೇಕ ಮಂಗಳವಾರ ಸಂಜೆ ವೇಳೆಗೆ ದತ್ತ ಪದಗ್ರಹಣ ಮಾಡುವ ಸಾಧ್ಯತೆಯಿದೆ.

ಬೆಂಗಳೂರು(ಜ.28): ರೂಪ ಕುಮಾರ್​ ದತ್ತ ರಾಜ್ಯದ ಮುಂದಿನ ಪೊಲೀಸ್ ಮಹಾನಿರ್ದೇಶಕರಾಗಲಿದ್ದಾರೆ. ಈ ಸಂಬಂಧ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಶಿಫಾರಸು ಕೂಡಾ ರವಾನೆಯಾಗಿದೆ. ಬಹುತೇಕ ಮಂಗಳವಾರ ಸಂಜೆ ವೇಳೆಗೆ ದತ್ತ ಪದಗ್ರಹಣ ಮಾಡುವ ಸಾಧ್ಯತೆಯಿದೆ.

ಈ ತಿಂಗಳಾಂತ್ಯಕ್ಕೆ ನಿವೃತ್ತರಾಗಲಿರುವ ಡಿಜಿಪಿ ಓಂಪ್ರಕಾಶ್​ ಸ್ಥಾನಕ್ಕೆ ಹಿರಿಯ ಐಪಿಎಸ್​ ಅಧಿಕಾರಿ ರೂಪ್​ ಕುಮಾರ್​ ದತ್ತಾ ನೇಮಕಗೊಳ್ಳಲಿದ್ದಾರೆ. ಡಿಜಿಪಿ ಸ್ಥಾನಕ್ಕೆ ದತ್ತಾ ಅವರ ಹೆಸರನ್ನು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಅಲ್ಲದೇ ಹಾಲಿ ಕೇಂದ್ರ ಸೇವೆಯಲ್ಲಿರುವ ದತ್ತಾ ಅವರನ್ನು ರಾಜ್ಯಸೇವೆಗಾಗಿ ಬಿಡುಗಡೆಗೊಳಿಸುವಂತೆಯೂ ರಾಜ್ಯ ಸರ್ಕಾರ ಕೇಂದ್ರ ಲೋಕಸೇವಾ ಆಯೋಗಕ್ಕೆ ಪತ್ರ ಬರೆದಿದೆ. ರಾಜ್ಯ ಸರ್ಕಾರದ ಶಿಫಾರಸಿಗೆ ಎರಡು ದಿನಗಳೊಳಗಾಗಿ ಕೇಂದ್ರದ ಒಪ್ಪಿಗೆ ಸಿಗಲಿದ್ದು, ಬಹುತೇಕ ಮಂಗಳವಾರ ಸಂಜೆ ಆರ್​.ಕೆ. ದತ್ತಾ ಡಿಜಿಪಿಯಾಗಿ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆಯಿದೆ.

ಇನ್ನು ಆರ್​.ಕೆ. ದತ್ತಾ ಯಾವುದೇ ಲಾಬಿ ಮಾಡದೇ ಡಿಜಿಪಿ ಹುದ್ದೆಗೇರುತ್ತಿದ್ದಾರೆ ಎಂಬುದೇ ಗಮನಾರ್ಹ ವಿಚಾರ. ರಾಜ್ಯದಲ್ಲಿ ಲೋಕಾಯುಕ್ತದಲ್ಲಿ ಎಡಿಜಿಪಿಯಾಗಿದ್ದಾಗ ಕಾನೂನು ಬಾಹಿರವಾಗಿ ವಿದೇಶದಲ್ಲಿ ಕಾನೂನು ಪದವಿ ಪಡೆದಿದ್ದಾರೆ ಎಂಬ ಆರೋಪ ದತ್ತ ಅವರ ಮೇಲಿತ್ತು. ಆದ್ರೆ ಕೆಲವು ದಿನಗಳ ಹಿಂದಷ್ಟೇ ಈ ಪ್ರಕರಣ ಸುಪ್ರೀಂಕೋರ್ಟ್​ನಲ್ಲಿ ವಜಾಗೊಂಡಿತ್ತು. ಆ ಬಳಿಕ ರಾಜ್ಯ ಸರ್ಕಾರವೇ ದತ್ತಾ ಅವರನ್ನು ಸಂಪರ್ಕಿಸಿ ಡಿಜಿಪಿ ಹುದ್ದೆ ಬಗ್ಗೆ ಆಸಕ್ತರಾಗಿದ್ದೀರಾ ಎಂದು ಕೇಳಿತ್ತು. ಆಗ ದತ್ತಾ ಮತ್ತೆ ರಾಜ್ಯ ಸೇವೆಗೆ ಮರಳುವ ಇಚ್ಛೆ ವ್ಯಕ್ತಪಡಿಸಿದ್ದರಲ್ಲದೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಕೂಡಾ ಒಲವು ಹೊಂದಿದ್ದ ಕಾರಣ ಯಾವುದೇ ಲಾಬಿ ಇಲ್ಲದೇ ದತ್ತಾ ಡಿಜಿಪಿ ಹುದ್ದೆಗೇರುವಂತಾಗಿದೆ. ಇನ್ನು ಡಿಜಿಪಿ ಹುದ್ದೆಗೆ ಗುಪ್ತದಳದ ಡಿಜಿಪಿ ನೀಲಮಣಿ ರಾಜು, ಸಿಐಡಿ ಡಿಜಿಪಿ ಕಿಶೋರ್​ ಚಂದ್ರ ಮತ್ತು ಅಗ್ನಿಶಾಮಕ ದಳದ ಡಿಜಿಪಿ ಎಂ.ಎನ್​. ರೆಡ್ಡಿ ತೀವ್ರ ಸ್ಪರ್ಧೆಯಲ್ಲಿದ್ದರು. ನೀಲಮಣಿ ರಾಜು ಅವರಿಗೆ ಮುಖ್ಯಮಂತ್ರಿಗಳ ಹಿಂದಿನ ಪ್ರಧಾನ ಕಾರ್ಯದರ್ಶಿ ನರಸಿಂಹರಾಜು ಅವರ ಪ್ರಭಾವ ಇತ್ತು, ಕಿಶೋರ್​ ಚಂದ್ರ ಪರ ಪ್ರಮುಖ ಒಕ್ಕಲಿಗ ನಾಯಕರು ಲಾಬಿ ನಡೆಸಿದ್ದರೆ, ಎಂ.ಎನ್​. ರೆಡ್ಡಿ ಅವರಿಗೆ ಸಚಿವ ಕೆ.ಜೆ. ಜಾರ್ಜ್​ ಬೆಂಬಲವಾಗಿ ನಿಂತಿದ್ದರು. ಇನ್ನು ಡಿಜಿಪಿ ಹುದ್ದೆ ಕೈತಪ್ಪುವ ಕಾರಣದಿಂದಾಗಿ ನೀಲಮಣಿ ರಾಜು ಮರಳಿ ಕೇಂದ್ರ ಸೇವೆಗೆ ಮರಳುವ ಸಾಧ್ಯತೆಯಿದೆ.

ಇನ್ನು ಆರ್.ಕೆ. ದತ್ತಾ ಅವರ ಸೇವಾವಧಿ ಮುಂದಿನ ಅಕ್ಟೋಬರ್​ವರೆಗೆ ಇರಲಿದ್ದು, ಮುಂದಿನ ಸಾರ್ವತ್ರಿಕ ಚುನಾವಣೆಯ ದೃಷ್ಟಿಯಿಂದ ಸರ್ಕಾರ ಅವರ ಸೇವಾವಧಿಯನ್ನು ವಿಸ್ತರಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಒಟ್ಟಾರೆ, ತೀವ್ರ ಪೈಪೋಟಿಯ ಮಧ್ಯೆ ಯಾವುದೇ ಲಾಬಿ ಮಾಡದೇ ರೂಪ್​ ಕುಮಾರ್​ ದತ್ತಾ ರಾಜ್ಯ ಪೊಲೀಸ್​ ಇಲಾಖೆಯ ಸಾರಥ್ಯ ವಹಿಸಿಕೊಳ್ಳುತ್ತಿದ್ದಾರೆ.

ಕಿರಣ್​ ಹನಿಯಡ್ಕ, ಪೊಲಿಟಿಕಲ್​ ಬ್ಯೂರೋ, ಸುವರ್ಣ ನ್ಯೂಸ್​.