ಬೆಂಗಳೂರು :  ‘ಸಚಿವ ಸಂಪುಟ ವಿಸ್ತರಣೆ ಆಗುತ್ತದೆಯೋ ಅಥವಾ ಪುನಾರಚನೆ ಆಗುತ್ತದೆಯೇ ಎಂಬುದನ್ನು ಈಗಲೇ ಹೇಳಲಾರೆ. ವಿಸ್ತರಣೆಯಾದರೆ ಕೇವಲ ಇಬ್ಬರಿಗೆ ಅವಕಾಶ ದೊರೆಯುತ್ತದೆ. ಪುನಾರಚನೆಯಾದರೆ ಹಲವರಿಗೆ ಅವಕಾಶ ದೊರೆಯಲಿದೆ. ಪುನಾರಚನೆ ನಡೆದಾಗ ಹಿರಿಯ ನಾಯಕರಾದ ರಾಮಲಿಂಗಾರೆಡ್ಡಿ ಸೇರಿದಂತೆ ಹಲವರಿಗೆ ಅವಕಾಶ ಸಿಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಿನೇಶ್‌ ಗುಂಡೂರಾವ್‌ ಅವರು ಪುನಾರಚನೆಯಾದರೆ ಹಿರಿಯರಿಗೆ ಅವಕಾಶ ನೀಡಬಹುದು ಎಂದು ಹೇಳಿದ್ದರೂ, ಕಾಂಗ್ರೆಸ್‌ ನಾಯಕರ ಒಲವು ವಿಸ್ತರಣೆಯತ್ತಲೇ ಇದ್ದು, ಈ ಬಗೆಗಿನ ತಮ್ಮ ನಿಲುವನ್ನು ಜೆಡಿಎಸ್‌ಗೂ ಸ್ಪಷ್ಟಪಡಿಸಿದ್ದಾರೆ. ಇನ್ನೇನಿದ್ದರೂ ಜೆಡಿಎಸ್‌ ವಿಸ್ತರಣೆ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ.

ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ದಿನೇಶ್‌ ಅವರು, ಪಕ್ಷದಲ್ಲಿ ಹಿರಿಯರಿಗೆ ಅವಕಾಶ ನೀಡಬೇಕು ಎಂಬ ಭಾವನೆಯಿದೆ. ವಿಸ್ತರಣೆಯಾದರೆ ಕೇವಲ ಇಬ್ಬರಿಗೆ ಅವಕಾಶ ದೊರೆಯುತ್ತದೆ. ಪುನಾರಚನೆಯಾದಾಗ ಹಿರಿಯರಾದ ಬಿಟಿಎಂ ಬಡಾವಣೆ ಶಾಸಕ ರಾಮಲಿಂಗಾರೆಡ್ಡಿ, ಶಿಡ್ಲಘಟ್ಟಶಾಸಕ ವಿ. ಮುನಿಯಪ್ಪ , ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ಅವರಿಗೆ ಖಂಡಿತ ಸಚಿವ ಸಂಪುಟದಲ್ಲಿ ಅವಕಾಶ ದೊರೆಯಲಿದೆ. ಇವರೆಲ್ಲ ಪಕ್ಷದಲ್ಲಿ ಶಿಸ್ತಿನಿಂದ ಇದ್ದಾರೆ ಎಂದು ಹೇಳಿದರು.

ರೋಷನ್‌ ಬೇಗ್‌ ಹೊರತುಪಡಿಸಿ ಉಳಿದೆಲ್ಲಾ ಹಿರಿಯರಿಗೆ ಸೂಕ್ತ ಜವಾಬ್ದಾರಿ ದೊರೆಯುವ ಬಗ್ಗೆ ಅವರು ಭರವಸೆ ನೀಡಿದರು. ರಾಮಲಿಂಗಾರೆಡ್ಡಿ ಅವರು ಪಕ್ಷದ ಸಂಯೋಜಕ ಸಮಿತಿಯ ಅಧ್ಯಕ್ಷರಾಗಿದ್ದು, ಅವರಿಗೆ ಅವಕಾಶ ಸಿಗಲಿದೆ. ವಿ.ಮುನಿಯಪ್ಪ, ಬಯ್ಯಾಪುರ ಅವರಿಗೂ ಸಂಪುಟದಲ್ಲಿ ಅವಕಾಶ ದೊರೆಯಲಿದೆ. ಆದರೆ, ಮಾಜಿ ಸಚಿವ ರೋಷನ್‌ ಬೇಗ್‌ ಬಹಿರಂಗವಾಗಿ ಪಕ್ಷದ ವಿರುದ್ಧ ಹೇಳಿಕೆ ಕೊಟ್ಟಿದ್ದಾರೆ. ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ವಿರುದ್ಧವೂ ಹೇಳಿಕೆ ನೀಡಿದ್ದಾರೆ. ಸಚಿವ ಸ್ಥಾನ ಮಾರಾಟ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ರೋಷನ್‌ ಬೇಗ್‌ ಎಐಸಿಸಿ ಸದಸ್ಯರೂ ಆಗಿರುವುದರಿಂದ ಅವರ ಹೇಳಿಕೆಗಳನ್ನು ಹೈಕಮಾಂಡ್‌ಗೆ ವರದಿ ರೂಪದಲ್ಲಿ ಸಲ್ಲಿಸಿದ್ದೇವೆ. ಹೈಕಮಾಂಡ್‌ ಮುಂದಿನ ಕ್ರಮ ಕೈಗೊಳ್ಳುತ್ತದೆ ಎಂದು ಸ್ಪಷ್ಟಪಡಿಸಿದರು.

ಹಿರಿಯರನ್ನು ಕಡೆಗಣಿಸಿಲ್ಲ:

ಪಕ್ಷ ಹಿರಿಯ ನಾಯಕರನ್ನು ಕಡೆಗಣಿಸಿದೆ ಎಂಬುದು ಸುಳ್ಳು. ಕೆ.ಸಿ. ವೇಣುಗೋಪಾಲ್‌ ಬಂದಿದ್ದಾಗಲೂ ಹಿರಿಯ ನಾಯಕರೊಂದಿಗೆ ಸಭೆ ನಡೆಸಿದ್ದೇವೆ. ಲೋಕಸಭೆ ಚುನಾವಣೆಗೆ ಟಿಕೆಟ್‌ ನೀಡುವಾಗಲೂ ಎಲ್ಲರ ಅಭಿಪ್ರಾಯ ಕೇಳಿದ್ದೆವು. ಹಿರಿಯ ನಾಯಕರ ಅಭಿಪ್ರಾಯ ಕ್ರೋಡೀಕರಿಸಿದ ಬಳಿಕವೇ ಟಿಕೆಟ್‌ ನೀಡಿದ್ದೇವೆ. ಹೀಗಾಗಿ ಪಕ್ಷದಲ್ಲಿ ಹಿರಿಯರನ್ನು ಕಡೆಗಣಿಸಿಲ್ಲ ಎಂದರು.

ಸುಮಲತಾ ಹೇಳಿಕೆ ವೈಯಕ್ತಿಕ:

ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್‌ ಪಕ್ಷವು ಜೆಡಿಎಸ್‌ ಜತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳದಿದ್ದರೆ ಹತ್ತು ಸ್ಥಾನ ಗೆಲ್ಲುತ್ತಿತ್ತು ಎಂಬ ಮಂಡ್ಯ ಸಂಸದೆ ಸುಮಲತಾ ಅಂಬರೀಷ್‌ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ ಎಂದು ದಿನೇಶ್‌ ಗುಂಡೂರಾವ್‌ ಹೇಳಿದರು.

ವೈಯಕ್ತಿಕ ಹೇಳಿಕೆಯಾಗಿರುವುದರಿಂದ ನಾನು ಪ್ರತಿಕ್ರಿಯಿಸುವುದಿಲ್ಲ. ಮೈತ್ರಿ ಬಗ್ಗೆ ಮಾತನಾಡಿ ಮಾಧ್ಯಮಗಳಿಗೆ ಅನುಕೂಲ ಮಾಡಿಕೊಡುವುದಿಲ್ಲ. ಮುಂದೆ ಏನಾಗಬೇಕು ಅದರ ಬಗ್ಗೆ ಮಾತ್ರ ಯೋಚಿಸುತ್ತೇವೆ. ಮುಗಿದು ಹೋಗಿರುವುದರ ಬಗ್ಗೆ ಮಾತನಾಡಲ್ಲ. ಲೋಕಸಭಾ ಚುನಾವಣೆ ಹಿನ್ನಡೆ ಬಗ್ಗೆ ಪರಿಶೀಲನೆಗೆ ಸಮಿತಿ ಮಾಡಿದ್ದೇವೆ. ಹಿನ್ನಡೆಗೆ ಕಾರಣಗಳೇನು ಎಂಬುದರ ಬಗ್ಗೆ ಅಧ್ಯಯನ ನಡೆಸಿ ಸಮಿತಿ ವರದಿ ನೀಡಲಿದೆ. ಆ ಬಳಿಕ ಪ್ರತಿಕ್ರಿಯೆ ನೀಡುತ್ತೇನೆ ಎಂದರು.