ಕೊಲಂಬೋ: 321ಕ್ಕೂ ಹೆಚ್ಚು ಅಮಾಯಕರ ಬಲಿಪಡೆದ ಶ್ರೀಲಂಕಾದ ಸರಣಿ ಸ್ಫೋಟ ಘಟನೆಗಳ ಪೈಕಿ ಐಷಾರಾಮಿ ಶಾಂಗ್ರಿಲಾ ಹಾಗೂ ಸಿನ್ನಮೋನ್‌ ಗ್ರಾಂಡ್‌ ಹೋಟೆಲ್‌ಗಳ ಮೇಲೆ ದಾಳಿ ನಡೆಸಿದ್ದು ಕೊಲೊಂಬೋದ ಸಿರಿವಂತ ಮುಸ್ಲಿಂ ಉದ್ಯಮಿಯ ಪುತ್ರರು ಎಂಬ ವಿಚಾರ ಇದೀಗ ಬಯಲಾಗಿದೆ. ಅಲ್ಲದೆ, ಉಗ್ರರು ನಾಲ್ಕನೇ ಹೋಟೆಲ್‌ ಮೇಲೆಯೂ ಬಾಂಬ್‌ ದಾಳಿ ಮಾಡಲು ಯೋಜಿಸಿದ್ದರು. ಆದರೆ, ಈ ದಾಳಿ ವಿಫಲಗೊಂಡಿದೆ ಎಂಬ ವಿಚಾರವೂ ಬೆಳಕಿಗೆ ಬಂದಿದೆ.

ಕೊಲಂಬೋದಲ್ಲಿ ಸಂಬಾತ ಪದಾರ್ಥಗಳ ಉದ್ಯಮ ನಡೆಸುವ ಶ್ರೀಮಂತ ಉದ್ಯಮಿಯೊಬ್ಬರ ಇಬ್ಬರು ಮಕ್ಕಳು ಶನಿವಾರವೇ ಪ್ರತ್ಯೇಕವಾಗಿ ಎರಡೂ ಹೋಟೆಲ್‌ಗಳಲ್ಲಿ ಕೊಠಡಿ ಕಾದಿರಿಸಿದ್ದರು. ಭಾನುವಾರ ಬೆಳಗ್ಗೆ ಎರಡೂ ಹೋಟೆಲ್‌ಗಳಲ್ಲಿ ಈಸ್ಟರ್‌ ಉಪಾಹಾರ ಕಾರ್ಯಕ್ರಮ ಆರಂಭವಾಗುತ್ತಲೇ, ಸೋದರರಿಬ್ಬರೂ ಒಂದೇ ಸಮಯಕ್ಕೆ ಎರಡೂ ಹೋಟೆಲ್‌ಗಳಲ್ಲಿ ದಾಳಿ ನಡೆಸಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ.

4ನೇ ಹೋಟೆಲ್‌ ದಾಳಿ ವಿಫಲ:  ಈ ನಡುವೆ ಉಗ್ರರು ಮತ್ತೊಂದು ಹೋಟೆಲ್‌ ಮೇಲೆ ದಾಳಿಗೆ ಯೋಜಿಸಿದ್ದರು. ಈ ಪ್ರಕಾರ ಉಗ್ರ ಸಂಘಟನೆಯ ಗ್ಯಾಂಗ್‌ನ ಬಾಂಬರ್‌ ಒಬ್ಬ ಈ ದಾಳಿಯ ಕೃತ್ಯ ನಡೆಸುವ ಹಿಂದಿನ ದಿನವೇ ಹೋಟೆಲ್‌ಗೆ ಹೋಗಿದ್ದ. ತನ್ನ ವಿಳಾಸ ನಮೂದಿಸಿ ರೂಮ್‌ ಬುಕ್‌ ಸಹ ಮಾಡಿದ್ದ. ಅಲ್ಲದೆ, ಭಾನುವಾರ ಬಾಂಬರ್‌ ಹೋಟೆಲ್‌ನಲ್ಲೇ ಇದ್ದರೂ, ಬಾಂಬ್‌ ಸ್ಫೋಟ ಮಾಡಲಿಲ್ಲ. ಈ ದಾಳಿ ವಿಫಲಗೊಂಡಿತೇ ಅಥವಾ ಯಾವುದೇ ಕಾರಣಕ್ಕಾಗಿ ದಾಳಿ ನಡೆಸಲು ಉಗ್ರ ನಿರಾಕರಿಸಿದನೇ ಎಂಬ ಮಾಹಿತಿ ಖಚಿತವಾಗಿಲ್ಲ.