ಬೆಂಗಳೂರು :  ಚುನಾವಣಾ ಆಯೋಗದ ಮಾರ್ಗಸೂಚಿ ಅನ್ವಯ 87 ತಹಸೀಲ್ದಾರರು ಹಾಗೂ 103 ಮಂದಿ ಗ್ರೇಡ್‌-2 ತಹಸೀಲ್ದಾರ್‌ರನ್ನು ವಿವಿಧ ಸ್ಥಳಗಳಿಗೆ ವರ್ಗಾವಣೆ ಮಾಡಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.

ಶುಕ್ರವಾರ ಆದೇಶ ಹೊರಡಿಸಿರುವ ಕಂದಾಯ ಇಲಾಖೆಯು, ಚುನಾವಣಾ ಆಯೋಗದ ಸೂಚನೆಯಂತೆ ಸಾರ್ವಜನಿಕ ಹಾಗೂ ಆಡಳಿತ ಹಿತದೃಷ್ಟಿಯಿಂದ ವರ್ಗಾವಣೆ ಮಾಡಲಾಗಿದೆ ಎಂದು ಹೇಳಿದೆ. ಈ ಮೂಲಕ ಪುರಸಭೆ ತಹಸೀಲ್ದಾರ್‌, ಚುನಾವಣಾ ತಹಸೀಲ್ದಾರ್‌, ಗ್ರೇಡ್‌-1 ಹಾಗೂ ಗ್ರೇಡ್‌-2 ತಹಸೀಲ್ದಾರ್‌ ಸೇರಿದಂತೆ ವಿವಿಧ ಹುದ್ದೆಗಳ ಒಟ್ಟು 190 ಮಂದಿಯನ್ನು ವರ್ಗಾವಣೆ ಮಾಡಿ ಆದೇಶಿಸಲಾಗಿದೆ.

ಲೋಕಸಭೆ ಚುನಾವಣೆಗೆ ಪ್ರಸ್ತುತ ಮತದಾರರ ಪಟ್ಟಿಪರಿಷ್ಕರಣೆ ನಡೆಯುತ್ತಿದೆ. ಇಷ್ಟೂಮಂದಿ ಅಧಿಕಾರಿಗಳು ಮತದಾರರ ಪಟ್ಟಿಪರಿಷ್ಕರಣೆ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ ಮತದಾರರ ಪಟ್ಟಿಪರಿಷ್ಕರಣೆ ಮುಗಿದ ಬಳಿಕ ಪ್ರಸ್ತುತ ವರ್ಗಾವಣೆಯಾಗಿರುವ ಸ್ಥಳಕ್ಕೆ ನಿಯುಕ್ತಿಗೊಳ್ಳಬೇಕು. ಅಲ್ಲಿಯವರೆಗೆ ಈಗಿರುವ ಹುದ್ದೆಗಳಲ್ಲೇ ಮುಂದುವರೆಯಬೇಕು ಎಂದೂ ಸಹ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಆದೇಶದಲ್ಲಿ ತಿಳಿಸಲಾಗಿದೆ.