ರೀ ಟ್ವೀಟ್’ಗಳು ಮಾನಹಾನಿಕರ ಆಗಬಲ್ಲವು ಎಂದು ಸರ್ವೋಚ್ಚ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ ಹಾಗೂ ರೀಟ್ವೀಟ್ ಮಾಡುವುದು ಅಪರಾಧವಲ್ಲ ಎಂಬ ಅರ್ಜಿಯೊಂದನ್ನು ತಿರಸ್ಕರಿಸಿದೆ.

ನವದೆಹಲಿ (ಡಿ.17): ರೀ ಟ್ವೀಟ್’ಗಳು ಮಾನಹಾನಿಕರ ಆಗಬಲ್ಲವು ಎಂದು ಸರ್ವೋಚ್ಚ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ ಹಾಗೂ ರೀಟ್ವೀಟ್ ಮಾಡುವುದು ಅಪರಾಧವಲ್ಲ ಎಂಬ ಅರ್ಜಿಯೊಂದನ್ನು ತಿರಸ್ಕರಿಸಿದೆ.

ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು ಆಮ್ ಆದ್ಮಿ ಪಕ್ಷದ ನೇತಾರ, ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್, ಆಪ್ ವಕ್ತಾರ ರಾಘವ ಚಡ್ಢಾ ಹಾಗೂ ಇತರ 4 ಆಪ್ ನೇತಾರರ ವಿರುದ್ಧ 10 ಕೋಟಿ ರು. ಮಾನಹಾನಿ ದಾವೆ ಹೂಡಿದ್ದರು.

ಕೇಜ್ರಿವಾಲ್ ತಮ್ಮ ವಿರುದ್ಧ ಅವಹೇಳನಕಾರಿ ಟ್ವೀಟ್’ಗಳನ್ನು ಮಾಡಿದ್ದುದನ್ನು ಜೇಟ್ಲಿ ದಾವೆಯಲ್ಲಿ ಉಲ್ಲೇಖಿಸಿದ್ದರು. ಈ ಪೈಕಿ ದಾವೆಗೆ ಗುರಿಯಾಗಿರುವ ರಾಘವ ಚಡ್ಢಾ, ತಾವು ಕೇಜ್ರಿ ಮಾಡಿದ ಟ್ವೀಟ್’ಗಳನ್ನು ರೀಟ್ವೀಟ್ ಮಾಡಿದ್ದು, ರೀಟ್ವೀಟ್’ಗಳು ತಮ್ಮ ಅನಿಸಿಕೆ ಆಗುವುದಿಲ್ಲ.

ಹೀಗಾಗಿ ತಮ್ಮ ವಿರುದ್ಧದ ಮಾನಹಾನಿ ಮೊಕದ್ದಮೆ ಕೈಬಿಡಬೇಕು ಎಂದು ಕೋರಿದ್ದರು. ಆದರೆ ಈ ವಾದವನ್ನು ಮುಖ್ಯ ನ್ಯಾ.ದೀಪಕ್ ಮಿಶ್ರಾ, ನ್ಯಾ. ಎ.ಎಂ. ಖಾನ್ವಿಲ್ಕರ್ ಹಾಗೂ ನ್ಯಾ. ಡಿ.ವೈ. ಚಂದ್ರಚೂಡ ಅವರ ಪೀಠ ತಿರಸ್ಕರಿಸಿತು.

ನ್ಯಾ. ಚಂದ್ರಚೂಡ ಪ್ರತಿಕ್ರಿಯೆ ನೀಡಿ, `ಒಂದು ಟ್ವೀಟ್ ಮಾನ ಹಾನಿಕರವಾಗಿದೆ ಅಥವಾ ಅಶ್ಲೀಲವಾಗಿದೆ ಎಂದುಕೊಳ್ಳೋಣ. ಅದನ್ನು ರೀಟ್ವೀಟ್ ಮಾಡಿರುವುದನ್ನು ಅದು ಅಪರಾಧವಲ್ಲ ಎಂದು ಪರಿಗಣಿಸಿದರೆ ರೀಟ್ವೀಟ್’ಗಳನ್ನು ಮಾಡುತ್ತ ವ್ಯಕ್ತಿಯ ತೇಜೋವಧೆ ಮಾಡಲು ಅವಕಾಶ ನೀಡಿದಂತಾಗುತ್ತದೆ' ಎಂದು ಅಭಿಪ್ರಾಯಪಟ್ಟರು.