ಪುಣೆ(ಮೇ.08): ಐದು ನಿಮಿಷ ಕರೆಂಟ್ ಇಲ್ಲ ಅಂದ್ರೆ ಆಕಾಶ ಭೂಮಿ ಒಂದು ಮಾಡೋ ಜನರ ಮಧ್ಯೆ, ಜೀವನವೀಡಿ ವಿದ್ಯುತ್ ನ್ನೇ ಬಳಸದ ಕಾಲೇಜು ಪ್ರೊಫೆಸರ್ ಒಬ್ಬರನ್ನು ಭೇಟಿಯಾಗ ಬನ್ನಿ.

ಹೌದು, ಪುಣೆಯ ಗರ್ವಾರೆ ಕಾಲೇಜಿನಲ್ಲಿ ಪ್ರೊಫೆಸರ್ ಆಗಿ ನಿವೃತ್ತಿ ಹೊಂದಿರುವ ಡಾ. ಹೇಮಾ ಸನೆ, ತಮ್ಮ ಜೀವಮಾನವೀಡಿ ವಿದ್ಯುತ್’ನ್ನೇ  ಬಳಸಿಲ್ಲ.

ನಗರದ ಬುಧವಾರ್ ಪೇಟ್’ನಲ್ಲಿ ನಿವೃತ್ತಿ ಜೀವನ ನಡೆಸುತ್ತಿರುವ 79 ವರ್ಷದ ಡಾ. ಹೇಮಾ, ಪರಿಸರ ರಕ್ಷಣೆಗಾಗಿ ವಿದ್ಯುತ್ ಬಳಸದಿರುವ ನಿರ್ಧಾರ ಕೈಗೊಂಡಿದ್ದಾರೆ.

ಸಣ್ಣ ಗುಡಿಸಲೊಂದರಲ್ಲಿ ವಾಸಿಸುತ್ತಿರುವ ಡಾ. ಹೇಮಾ, ಒಂದು ನಾಯಿ, ಎರಡು ಬೆಕ್ಕು ಮತ್ತು ಅಸಂಖ್ಯ ಹಕ್ಕಿಗಳಿಗೆ ಆಶ್ರಯ ನೀಡುತ್ತಾರೆ. ಜೀವನ ನಡೆಸಲು ವಿದ್ಯುತ್ ಅವಶ್ಯಕತೆ ಇಲ್ಲ ಎಂಬುದು ಹೇಮಾ ಸನೆ ಅವರ ಅಭಿಮತ.

ಪುಣೆಯ ಸಾವಿತ್ರಿಭಾಯಿ ಪುಲೆ ವಿವಿಯಿಂದ ಸಸ್ಯಶಾಸ್ತ್ರದಲ್ಲಿ ಪಿಹೆಚ್.ಡಿ ಪದವಿ ಪಡೆದಿರುವ ಡಾ. ಹೇಮಾ, ಸಸ್ಯಶಾಸ್ತ್ರ ಮತ್ತು ಪರಿಸರದ ಕುರಿತು ಅನೇಕ ಪುಸ್ತಕಗಳನ್ನು ಬರೆದಿದ್ದಾರೆ.

ವಿಚಿತ್ರ ಸಂಗತಿ ಎಂದರೆ ಡಾ. ಹೇಮಾ ಅವರನ್ನು ಸ್ಥಳೀಯ ಜನರು ಹುಚ್ಚಿ ಎಂದು ಕರೆಯುತ್ತಾರೆ. ಆದರೆ ಹಾಗೆ ಕರೆದವರಿಗೆಲ್ಲಾ ಡಾ.ಹೇಮಾ ಬುದ್ಧನ ಜನಪ್ರಿಯ ‘ನಿಮ್ಮ ಜೀವನದ ದಾರಿಯನ್ನು ನೀವೇ ಆಯ್ಕೆ ಮಾಡಿಕೊಳ್ಳಿ’ ಎಂಬ ಸಂದೇಶವನ್ನು ಪುನರುಚ್ಛಿಸುತ್ತಾರೆ.