ಕಲಬುರಗಿ :  ಸಿನಿಮಾ ಕ್ಷೇತ್ರದವರ ಬಗ್ಗೆ ತೋರಿಸುವ ಆಸಕ್ತಿಯನ್ನು ದಕ್ಷ ಅಧಿಕಾರಿಗಳ ಬಗ್ಗೆ ಸರ್ಕಾರ ತೋರಿಸುತ್ತಿಲ್ಲ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಕಲಬುರಗಿಯಲ್ಲಿ ಮಾತನಾಡಿದ ಅವರು ಸಿನಿಮಾದವರು ಹಣ ತೆಗೆದುಕೊಂಡು ಸಿನಿಮಾ ಮಾಡುತ್ತಾರೆ. ಅಗಲಿದ ಸಿನಿಮಾ ಮಂದಿಯ ಸ್ಮಾರಕ ನಿರ್ಮಾಣ ಮಾಡಲು ಸರ್ಕಾರ ಬಹಳ ಆಸಕ್ತಿ ತೋರಿಸುತ್ತದೆ. ಆದರೆ ಅಗಲಿದ ಪ್ರಮಾಣಿಕ, ದಕ್ಷ ಅಧಿಕಾರಿಗಳ ಸ್ಮಾರಕ ನಿರ್ಮಿಸುವುದಕ್ಕೆ ಏಕೆ ಆಸಕ್ತಿ ವಹಿಸುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.  

ಅಲ್ಲದೇ ಇತ್ತೀಚೆಗಷ್ಟೇ ಅನಾರೋಗ್ಯದಿಂದ ನಿಧನರಾದ ದಕ್ಷ ಪೊಲೀಸ್ ಅಧಿಕಾರಿ ಮಧುಕರ್ ಶೆಟ್ಟಿ ಸ್ಮಾರಕ ನಿರ್ಮಾಣಕ್ಕೆ ಮುಂದಾಗಲಿ. ಸ್ಮಾರಕ ನಿರ್ಮಾಣಕ್ಕೆ ಬೇಕಾದ ಆರ್ಥಿಕ ಸಹಾಯವನ್ನು ನಾನು ಮಾಡುತ್ತೇನೆ ಎಂದರು.

ಇನ್ನು ಯಾವುದೇ ಪಕ್ಷ ಇರಲಿ, ರಾಜಕಾರಣಿಗಳೇ ಹಾಗೆ ತಮ್ಮನ್ನು ಮಾತ್ರ ತಾವು ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ. ದಕ್ಷ ಅಧಿಕಾರಿಗಳ ಕೆಲಸ ಅವರ ಅಗಲಿಕೆಯ ನಂತರ ನೆನಪಿನಲ್ಲಿ ಉಳಿಯುವುದಿಲ್ಲ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.