ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ರಾಮದಾಸ್ ಅಠವಾಳೆ ಆಗ್ರಹ! ಶೇ.50 ರಿಂದ ಶೇ.75 ಕ್ಕೆ ಮೀಸಲಾತಿ ಹೆಚ್ಚಳಕ್ಕೆ ಕೇಂದ್ರ ಸಚಿವ ಒತ್ತಾಯ! ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಹೆಚ್ಚಳಕ್ಕೆ ಅಠವಾಳೆ ಆಗ್ರಹ! ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದ ರಾಮದಾಸ್ ಅಠವಾಳೆ
ನವದೆಹಲಿ(ಅ.13): ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೇ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ರಾಮದಾಸ್ ಅಠವಾಳೆ ಅವರಿಗೆ ಮತ್ತೆ ಮೀಸಲಾತಿ ನೆನಪಾದಂತಿದೆ. ಸರ್ಕಾರಿ ನೌಕರಿಗಳಲ್ಲಿ ಎಸ್‌ಸಿ ಎಸ್‌ಟಿ ಮೀಸಲಾತಿಯನ್ನು ಶೇ.50 ರಿಂದ ಶೇ.75ಕ್ಕೆ ಹೆಚ್ಚಿಸಬೇಕು ಎಂದು ಅಠವಾಳೆ ಆಗ್ರಹಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅಠವಾಳೆ, ಸರ್ಕಾರಿ ನೌಕರಿಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಇರುವ ಮೀಸಲಾತಿ ಪ್ರಮಾಣವನ್ನು ರಾಜ್ಯ ಸರ್ಕಾರಗಳು ಹೆಚ್ಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮೀಸಲಾತಿಗಾಗಿ ಈಗಾಗಲೇ ಹಲವು ವರ್ಗಗಳು ಆಗ್ರಹಿಸುತ್ತಿದ್ದು, ಇದರಿಂದ ಪ್ರಸಕ್ತ ಮೀಸಲಾತಿ ನೀತಿ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅಠವಾಳೆ ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಿರುವ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿ ಶೋಷಿತ ವರ್ಗವನ್ನು ಮೇಲೆತ್ತುವ ಕಾರ್ಯ ಆಗಬೇಕಿದೆ ಎಂದು ಅವರು ಹೇಳಿದ್ದಾರೆ.
