ಬೆಂಗಳೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆ ರಾಜ್ಯಗಳಲ್ಲೂ ಮೀಸಲಾತಿ ಇರುವುದರಿಂದ ರಾಜ್ಯಪಾಲರು ಒಪ್ಪಿಗೆ ಕೊಡುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರು: ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡಲು ಕಾನೂನು ತಿದ್ದುಪಡಿ ಮಾಡಿ ರಾಜ್ಯಪಾಲರಿಗೆ ಮಸೂದೆ ಕಳುಹಿಸಿ ಕೊಟ್ಟಿದ್ದೇವೆ. ಒಪ್ಪಿಗೆಗೆ ವಿಳಂಬವಾದ ಹಿನ್ನೆಲೆಯಲ್ಲಿ ರಾಜ್ಯಪಾಲರ ಬಳಿ ತೆರಳಿ ಶೀಘ್ರ ಒಪ್ಪಿಗೆ ಕೊಡುವಂತೆ ಕೋರಿದ್ದೇನೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.

ಬೆಂಗಳೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆ ರಾಜ್ಯಗಳಲ್ಲೂ ಮೀಸಲಾತಿ ಇರುವುದರಿಂದ ರಾಜ್ಯಪಾಲರು ಒಪ್ಪಿಗೆ ಕೊಡುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಹದಾಯಿ ನದಿ ನೀರಿನ ವಿಚಾರವಾಗಿ ನ್ಯಾಯಾಲಯದ ಹೊರಗೆ ವಿವಾದ ಬಗೆಹರಿಸಿಕೊಳ್ಳಲು ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳು ಪರಸ್ಪರ ಒಪ್ಪಬೇಕು. ಆದರೆ ಮೂರು ರಾಜ್ಯಗಳನ್ನು ಒಪ್ಪಿಸುವವರು ಯಾರು? ಎಂದು ಪ್ರಶ್ನಿಸಿದ ಅವರು, ಮೂರು ರಾಜ್ಯಗಳನ್ನು ಕನಿಷ್ಠ ಮಾತುಕತೆ ನಡೆಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಒಪ್ಪಿಸಬೇಕು. ಪ್ರಧಾನಿಗಳು ಮಧ್ಯಸ್ಥಿಕೆಗೆ ಒಪ್ಪಿದರೆ ಮಾತ್ರ ಈ ಸಮಸ್ಯೆ ಬಗೆಹರಿಯುತ್ತದೆ. ಈ ಹಿಂದೆ ಪ್ರಧಾನಮಂತ್ರಿಗಳು ಮಧ್ಯಸ್ಥಿಕೆ ವಹಿಸಿದ ನಿದರ್ಶನಗಳಿವೆ. ಆದರೆ ಮಹದಾಯಿ ನೀರಿನ ವಿಚಾರವನ್ನು ಬಗೆಹರಿಸುವ ಇಚ್ಛೆ ಪ್ರಧಾನಿ ಅವರಿಗಿಲ್ಲ ಎಂದು ಆರೋಪಿಸಿದರು.

ವೀರಶೈವ ಪ್ರತ್ಯೇಕ ಧರ್ಮ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರತ್ಯೇಕ ಧರ್ಮ ಮಾಡುವುದು ಕೇಂದ್ರ ಸರ್ಕಾರಕ್ಕೆ ಬಿಟ್ಟ ವಿಚಾರ. ಆಯಾ ಸಮುದಾಯಗಳ ಸಂಘಟನೆಗಳು ಮನವಿ ಸಲ್ಲಿಸಿದರೆ ನಾವು ಕೇಂದ್ರಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತೇವಷ್ಟೇ ಎಂದು ಸ್ಪಷ್ಟಪಡಿಸಿದರು.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮ ನಡೆಯುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ನಿವೃತ್ತ ಐಎಎಸ್ ಅಧಿಕಾರಿ ವಿನಯ್‌ಕುಮಾರ್ ನೇತೃತ್ವದ ಸಮಿತಿ ತನಿಖೆ ನಡೆಸುತ್ತಿದೆ. ಅವರ ವರದಿ ಬಂದ ನಂತರ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದರು.

ರಾಷ್ಟ್ರೀಯ ಹೆದ್ದಾರಿ ಪಕ್ಕದ ಬಾರ್‌ಗಳ ಸಮಸ್ಯೆ ಇತ್ಯರ್ಥಗೊಳ್ಳಬೇಕಾದರೆ ಕೇಂದ್ರ ಸರ್ಕಾರ ಡಿನೋಟಿಫೈ ಮಾಡಬೇಕು. ರಾಜ್ಯ ಹೆದ್ದಾರಿಗಳಲ್ಲಿರುವ ಮದ್ಯದಂಗಡಿ ತೆರವುಗೊಳಿಸದಂತೆ ರಾಜ್ಯ ಸರ್ಕಾರ ರಾಜ್ಯ ಹೆದ್ದಾರಿಗಳನ್ನು ಡಿನೋಟಿಫೈ ಮಾಡಿದೆ. ಆದರೆ ರಾಷ್ಟ್ರೀಯ ಹೆದ್ದಾರಿಗಳನ್ನು ಡಿನೋಟಿಫೈ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರ ಇಲ್ಲ ಎಂದು ಹೇಳಿದರು.

ಕೆರೆಗಳ ಡಿನೊಟಿಫಿಕೇಶನ್ ಮಾಡುವ ಬಗ್ಗೆ ರಾಜ್ಯ ಸರ್ಕಾರ ಇನ್ನೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಈಗಾಗಲೇ ಒತ್ತುವರಿಯಾಗಿ ಕೆರೆಯ ಸ್ವರೂಪ ಕಳೆದುಕೊಂಡಿರುವ ಕೆರೆಗಳ ಡಿನೋಟಿಫಿಕೇಶನ್ ಬಗ್ಗೆ ಚಿಂತನೆ ನಡೆಸಿದ್ದೇವೆ. ಆದರೆ ಕೆರೆಗಳನ್ನು ಹೊಸದಾಗಿ ಡಿನೊಟಿಫೈ ಮಾಡುತ್ತಿದ್ದೇವೆ ಎಂಬಂತೆ ಬಿಂಬಿಸಲಾಗುತ್ತಿದೆ. ಕೆರೆಗಳ ಜೀರ್ಣೋದ್ದಾರ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಕೆರೆಗಳನ್ನುಉಳಿಸಿಕೊಳ್ಳುವುದು ಸರ್ಕಾರದ ಉದ್ದೇಶ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ
epaperkannadaprabha.com