ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಸದಸ್ಯರೆಲ್ಲರೂ ವರದಿಗೆ ಅಭಿಪ್ರಾಯ ನೀಡಿದ್ದಾರೆ. ಇಂದಿನ ಸಭೆಗೆ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಗೈರು ಹಾಜರಾಗಿದ್ದು, ಸಭೆಯಲ್ಲಿ ಶಾಸಕರಾದ ಕೆ.ಎನ್. ರಾಜಣ್ಣ, ಶಿವಾನಂದ ಪಾಟೀಲ್, ಪಿ.ಎಂ. ನರೇಂದ್ರ ಸ್ವಾಮಿ ಮಾತ್ರ ಹಾಜರಿದ್ದರು. ಇತರೆ ಸದಸ್ಯರಿಗೂ ಮಾಹಿತಿ ನೀಡಿದ್ದೆವು. ಕುಮಾರಸ್ವಾಮಿ ಅವರು ಅನಾರೋಗ್ಯದ ಕಾರಣ ನೀಡಿ ಬಂದಿಲ್ಲ ಎಂದರು.

ಬೆಂಗಳೂರು: ಬಿಜೆಪಿ ನಾಯಕಿ, ಮಾಜಿ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಶಾಕ್ ನೀಡಲಿದೆ ಎನ್ನಲಾಗಿರುವ ವಿದ್ಯುತ್ ಖರೀದಿ ಅಕ್ರಮ ಕುರಿತ ಜಂಟಿ ಸದನ ಸಮಿತಿ ವರದಿಯನ್ನು ಬೆಳಗಾವಿ ಅಧಿವೇಶನದಲ್ಲಿ ಮಂಡಿಸಲು ಬೇಕಿದ್ದ ಪೂರ್ವ ಸಿದ್ಧತೆ ಪೂರ್ಣಗೊಂಡಿದೆ. ಸದನ ಸಮಿತಿಯ ಅಂತಿಮ ಸಭೆ ಮಂಗಳವಾರ ನಡೆದಿದ್ದು, ನೇರ ಹಾಗೂ ಲಿಖಿತ ರೂಪದಲ್ಲಿ ಬಂದ ಸದಸ್ಯರ ಅಭಿಪ್ರಾಯಗಳನ್ನು ಕ್ರೋಢೀಕರಿಸಲಾಗಿದೆ. ಶೀಘ್ರವೇ ಈ ವರದಿಯನ್ನು ಸ್ಪೀಕರ್'ಗೆ ಸಲ್ಲಿಸಲಿದ್ದು, ಬೆಳಗಾವಿ ಅಧಿವೇಶನದಲ್ಲಿ ಮಂಡನೆಯಾಗಲಿದೆ ಎಂದು ಸಮಿತಿ ಅಧ್ಯಕ್ಷ ಹಾಗೂ ಇಂಧನ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, 2010ರಿಂದ 2014ರ ಅವಧಿಯಲ್ಲಿ ನಡೆದ ವಿದ್ಯುತ್ ಖರೀದಿ ಅವ್ಯವಹಾರ ಸಂಬಂಧಿ ಜಂಟಿ ಸದನ ಸಮಿತಿಯ ಅಂತಿಮ ಸಭೆ ಮುಗಿದಿದೆ. ವರದಿಯ ಗೌಪ್ಯತೆ ಕಾಯ್ದುಕೊಂಡು ಬೆಳಗಾವಿ ವಿಧಾನಮಂಡಲ ಅಧಿವೇಶನದಲ್ಲಿ ಅಂತಿಮ ವರದಿ ಮಂಡನೆ ಮಾಡಲಾಗುವುದು ಎಂದರು.

ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಸದಸ್ಯರೆಲ್ಲರೂ ವರದಿಗೆ ಅಭಿಪ್ರಾಯ ನೀಡಿದ್ದಾರೆ. ಇಂದಿನ ಸಭೆಗೆ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಗೈರು ಹಾಜರಾಗಿದ್ದು, ಸಭೆಯಲ್ಲಿ ಶಾಸಕರಾದ ಕೆ.ಎನ್. ರಾಜಣ್ಣ, ಶಿವಾನಂದ ಪಾಟೀಲ್, ಪಿ.ಎಂ. ನರೇಂದ್ರ ಸ್ವಾಮಿ ಮಾತ್ರ ಹಾಜರಿದ್ದರು. ಇತರೆ ಸದಸ್ಯರಿಗೂ ಮಾಹಿತಿ ನೀಡಿದ್ದೆವು. ಕುಮಾರಸ್ವಾಮಿ ಅವರು ಅನಾರೋಗ್ಯದ ಕಾರಣ ನೀಡಿ ಬಂದಿಲ್ಲ ಎಂದರು.

ಜೆಡಿಎಸ್, ಬಿಜೆಪಿ ಗೈರು: ಬಿಜೆಪಿ ಅವಧಿಯಲ್ಲಿ ನಡೆದಿರುವ ವಿದ್ಯುತ್ ಖರೀದಿಯಲ್ಲಿ ಆಗಿರುವ ಹಗರಣದ ಬಗೆಗಿನ ಸದನ ಸಮಿತಿ ಅಂತಿಮ ಸಭೆ ಮಂಗಳವಾರ ನಡೆಯಿತು. ಸಚಿವ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ 2014ರಲ್ಲಿ ರಚಿಸಿದ್ದ ಸಮಿತಿಗೆ ಎಂಟು ಸದಸ್ಯರೂ ಸಹಿ ಹಾಕಬೇಕಿತ್ತು. ಅಂತಿಮ ಸಭೆಗೆ ಬಿಜೆಪಿಯ ಬಸವರಾಜ ಬೊಮ್ಮಾಯಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಪಕ್ಷೇತರ ಶಾಸಕ ಪಿ. ರಾಜೀವ್ ಗೈರು ಹಾಜರಾಗಿದ್ದರು. ಜೆಡಿಎಸ್‌'ನ ಎಚ್.ಡಿ.ಕುಮಾರಸ್ವಾಮಿ ಹಾಗೂ ಜಿ.ಟಿ. ದೇವೇಗೌಡ ಅವರೂ ಗೈರು ಹಾಜರಾಗಿದ್ದು, ಅ.30ರಂದೂ ಸಹ ಕುಮಾರಸ್ವಾಮಿ ಗೈರು ಹಾಜರಾಗಿದ್ದರು. ಕಾಂಗ್ರೆಸ್‌'ನ ಮೂರು ಮಂದಿ ಸದಸ್ಯರು ಹಾಜರಿದ್ದ ಕಾರಣ ಅಂತಿಮ ಸಭೆ ನಡೆಸಲಾಯಿತು.

ಏನಿದು ಹಗರಣ?: ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ 2011ರಿಂದ 2014ರವರೆಗೆ ಅಲ್ಪಾವಧಿ ವಿದ್ಯುತ್ ಖರೀದಿ ಮಾಡಲು, ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಂಡಿದ್ದ 25 ವರ್ಷಗಳ ದೀರ್ಘಾವಧಿ ಟೆಂಡರನ್ನು ರದ್ದುಪಡಿಸಲಾಗಿತ್ತು. ಖಾಸಗಿ ಕಂಪನಿಯೊಂದಕ್ಕೆ ನೆರವಾಗಲು ಈ ತೀರ್ಮಾನ ಕೈಗೊಳ್ಳಲಾಯಿತು ಎಂಬುದು ಆರೋಪ. ಈ ಮೂಲಕ 29 ಸಾವಿರ ಕೋಟಿ ಹಣವನ್ನು ಕಳೆದ ಸರ್ಕಾರ ಬೊಕ್ಕಸಕ್ಕೆ ನಷ್ಟ ಉಂಟುಮಾಡಿದೆ. ಇದರಿಂದಾಗಿ 25 ವರ್ಷಗಳ ಕಾಲ ರಾಜ್ಯದ ಜನತೆ ಹೆಚ್ಚುವರಿ ವಿದ್ಯುತ್ ಶುಲ್ಕ ಪಾವತಿ ಮೂಲಕ 29 ಸಾವಿರ ಕೋಟಿ ನಷ್ಟ ಅನುಭವಿಸಬೇಕಾಗಿದೆ ಎಂಬ ಆರೋಪ ಕೇಳಿಬಂದಿದೆ. ಒಂದು ಕಂಪನಿಗೆ ಲಾಭ ಮಾಡಿಕೊಡಲು ದೀರ್ಘಾವಧಿ ಟೆಂಡರ್ ರದ್ದುಪಡಿಸಿದ್ದೇ ಹಗರಣದ ತಿರುಳು.

29,500 ಕೋಟಿ ನಷ್ಟ ನಿಜ: ಕುಮಾರಸ್ವಾಮಿ ಪತ್ರ
ಬೆಂಗಳೂರು: ಇಂಧನ ಇಲಾಖೆಯಲ್ಲಿ 2010ರಿಂದ 2014ರ ಅವಧಿಯ ವಿದ್ಯುತ್ ಖರೀದಿಯಲ್ಲಿನ ಅವ್ಯವಹಾರದ ತನಿಖೆಗೆ ರಚಿಸಿದ್ದ ಜಂಟಿ ಸದನ ಸಮಿತಿಯ ಸಭೆಗೆ ಗೈರುಹಾಜರಾಗಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ಸದನ ಸಮಿತಿ ಅಧ್ಯಕ್ಷರಿಗೆ ಪತ್ರ ಬರೆದಿದ್ದು, ಕಳೆದ ಬಿಜೆಪಿ ಅವಧಿಯಲ್ಲಿ ಅಕ್ರಮವಾಗಿ ದೀರ್ಘಾವಧಿ ಟೆಂಡರ್ ರದ್ದುಗೊಳಿಸಿ 29,413 ಕೋಟಿಯಷ್ಟು ಭಾರಿ ನಷ್ಟ ಉಂಟುಮಾಡಿರುವುದು ಸತ್ಯ ಎಂದು ತಮ್ಮ ಅಭಿಪ್ರಾಯ ನೀಡಿದ್ದಾರೆ.

ಎಚ್‌ಡಿಕೆಗೆ ಡಿಕೆಶಿ ತಿರುಗೇಟು:
ಹಗರಣದಲ್ಲಿ ಸರ್ಕಾರ ಕೆಲವರನ್ನು ರಕ್ಷಿಸಲು ಯತ್ನಿಸುತ್ತಿದೆ ಎಂಬ ಕುಮಾರಸ್ವಾಮಿ ಅವರ ಅಭಿಪ್ರಾಯಕ್ಕೆ ನಾನು ಏನೂ ಹೇಳಲಾಗದು. ಅವರು ಹಿರಿಯರು, ಅನುಭವಿಗಳು. ಅವರ ಪಾಂಡಿತ್ಯವನ್ನು ಇಲ್ಲ ಎನ್ನಲಾಗದು. ಎಲ್ಲರೂ ಸೇರಿ ನನ್ನನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ಯತ್ನಿಸುತ್ತಿದ್ದಾರೆ.
- ಡಿ.ಕೆ.ಶಿವಕುಮಾರ್, ಇಂಧನ ಸಚಿವ

ಕನ್ನಡಪ್ರಭ ವಾರ್ತೆ
epaperkannadaprabha.com