ಸರ್ಕಾರವು ಆರ್’ಟಿಐ ಕಾಯ್ದೆಯಲ್ಲಿ ತಿದ್ದುಪಡಿಗಳನ್ನು ಮಾಡಲು ಉದ್ದೇಶಿದ್ದು, ಪ್ರಸ್ತಾಪಿತ ನಿಯಮಗಳ ಪ್ರಕಾರ ಅರ್ಜಿದಾರರು ತಮ್ಮ ಅರ್ಜಿಯನ್ನು ಹಿಂಪಡೆಯಬಹುದಾಗಿದೆ. ಇನ್ನೊಂದು ತಿದ್ದುಪಡಿ ಪ್ರಕಾರ, ಅರ್ಜಿದಾರರು ಮೃತಪಟ್ಟಲ್ಲಿ, ಮಾಹಿತಿ ನೀಡುವ ಪ್ರಕ್ರಿಯೆಯನ್ನು ಅಲ್ಲೇ ಸ್ಥಗಿತಗೊಳಿಸಬಹುದಾಗಿದೆ.
ಮಾಹಿತಿ ಹಕ್ಕು ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಕೇಂದ್ರ ಸರ್ಕಾರವು ಅದನ್ನು ದುರ್ಬಲಗೊಳಿಸಲು ಯತ್ನಿಸುತ್ತಿದೆಯೆಂದು ಸಾಮಾಜಿಕ ಹೋರಾಟಗಾರರು ಆರೋಪಿಸಿದ್ದಾರೆ. ಪ್ರಸ್ತಾಪಿತ ತಿದ್ದುಪಡಿಗಳನ್ನು ಕೈಬಿಡಬೇಕೆಂದು ಅವರು ಆಗ್ರಹಿಸಿದ್ದಾರೆ.
ಸರ್ಕಾರವು ಆರ್’ಟಿಐ ಕಾಯ್ದೆಯಲ್ಲಿ ತಿದ್ದುಪಡಿಗಳನ್ನು ಮಾಡಲು ಉದ್ದೇಶಿದ್ದು, ಪ್ರಸ್ತಾಪಿತ ನಿಯಮಗಳ ಪ್ರಕಾರ ಅರ್ಜಿದಾರರು ತಮ್ಮ ಅರ್ಜಿಯನ್ನು ಹಿಂಪಡೆಯಬಹುದಾಗಿದೆ. ಇನ್ನೊಂದು ತಿದ್ದುಪಡಿ ಪ್ರಕಾರ, ಅರ್ಜಿದಾರರು ಮೃತಪಟ್ಟಲ್ಲಿ, ಮಾಹಿತಿ ನೀಡುವ ಪ್ರಕ್ರಿಯೆಯನ್ನು ಅಲ್ಲೇ ಸ್ಥಗಿತಗೊಳಿಸಬಹುದಾಗಿದೆ.
ಆದರೆ ಈ ತಿದ್ದುಪಡಿಗಳಿಂದ ಮಾಹಿತಿ ಹಕ್ಕು ಕಾಯ್ದೆ ಇನ್ನಷ್ಟು ದುರ್ಬಲವಾಗುವುದೆಂದು ಖ್ಯಾತ ಸಾಮಾಜಿಕ ಹೋರಾಟಗಾರರಾದ ಅರುಣಾ ರಾಯ್, ನಿಖಿಲ್ ಡೇ, ಹಾಗೂ ಅಂಜಲಿ ಭಾರಧ್ವಜ್ ಮುಂತಾದವರು ಅಭಿಪ್ರಾಯಪಟ್ಟಿದ್ದಾರೆ.
ಹೊಸ ನಿಯಮಗಳಿಂದಾಗಿ ಮಾಹಿತಿ ಹಕ್ಕು ಹಕ್ಕು ಕಾರ್ಯಕರ್ತರ ಮೇಲೆ ಒತ್ತಡ ತಂದು ಅರ್ಜಿಗಳನ್ನು ಹಿಂಪಡೆಯುವ ಸಾಧ್ಯತೆಗಳು ಇದೆಯಲ್ಲದೇ, ಲಕ್ಷಾಂತರ ಕಾರ್ಯಕರ್ತರ ಪ್ರಾಣಕ್ಕೂ ಅಪಾಯ ಒಡ್ಡಿದಂತಾಗುತ್ತದೆ ಎಂದು ಅವರು ಹೇಳಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ 57 ಮಂದಿ ಮಾಹಿತಿ ಹಕ್ಕು ಕಾರ್ಯಕರ್ತರನ್ನು ಹತ್ಯೆಗೈಯಲಾಗಿದೆಯೆಂದು ಅವರು ಹೇಳಿದ್ದಾರೆ.
ಮಾಹಿತಿ ಹಕ್ಕು ಕಾರ್ಯಕರ್ತರ ಸಂರಕ್ಷಣೆ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸುವ ಬದಲು ಸರ್ಕಾರ ಹೊಸ ತಿದ್ದುಪಡಿಗಳನ್ನು ಮಾಡುವ ಮೂಲಕ ಕಾರ್ಯಕರ್ತರನ್ನು ಅಪಾಯದಂಚಿಗೆ ದೂಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಕುರಿತು ಕೇಂದ್ರ ಸಿಬ್ಬಂದಿ, ಸಾರ್ವಜನಿಕ ಅಹವಾಲು ಹಾಗೂ ಪಿಂಚಣಿ ಇಲಾಖೆಯ ರಾಜ್ಯ ಸಚಿವ ಡಾ.ಜಿತೇಂದ್ರ ಸಿಂಗ್ ಅವರಿಗೆ ಮನವಿ ಮಾಡಲಾಗಿದ್ದು, ತಿದ್ದುಪಡಿಗಳನ್ನು ಕೈಬಿಡಲು ಅವರು ಆಗ್ರಹಿಸಿದ್ದಾರೆ.
ಈ ನಿಟ್ಟಿನಲ್ಲಿ change.org ನಲ್ಲಿ ಆನ್’ಲೈನ್ ಮನವಿಯನ್ನು ಆರಂಭಿಸಲಾಗಿದ್ದು, ಮಾಜಿ ಸಂಸದೆ ಹಾಗೂ ಸ್ಯಾಂಡಲ್’ವುಡ್ ನಟಿ ರಮ್ಯಾ ಕೂಡಾ ಅದನ್ನು ಬೆಂಬಲಿಸಿದ್ದಾರೆ.