ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆ ಸಚಿವರಾಗಿ ಸ್ಥಾನ ಗಿಟ್ಟಿಸಿರುವ ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆಯವರನ್ನು  ಪ್ರಧಾನಿ ಮೋದಿ ಸಂಪುಟದಿಂದ ಕೈಬಿಡಬೇಕು ಎಂದು ಭಾರತೀಯ ವೈದ್ಯರ ಸಂಘವು (Indian Medical Association-IMA) ಆಗ್ರಹಿಸಿದೆ.

ನವದೆಹಲಿ: ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆ ಸಚಿವರಾಗಿ ಸ್ಥಾನ ಗಿಟ್ಟಿಸಿರುವ ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆಯವರನ್ನು ಪ್ರಧಾನಿ ಮೋದಿ ಸಂಪುಟದಿಂದ ಕೈಬಿಡಬೇಕು ಎಂದು ಭಾರತೀಯ ವೈದ್ಯರ ಸಂಘವು (Indian Medical Association-IMA) ಆಗ್ರಹಿಸಿದೆ.

ಪ್ರಧಾನಿ ಮೋದಿಗೆ ಬರೆದಿರುವ ಪತ್ರದಲ್ಲಿ ವೈದ್ಯರ ಸಂಘವು, ಹೆಗಡೆಗೆ ಸಚಿವ ಸ್ಥಾನ ಕೊಟ್ಟಿರುವುದು ಸರ್ಕಾರದ ಕಡೆಯಿಂದ ತಪ್ಪು ಸಂದೇಶ ನೀಡಿದಂತಾಗುತ್ತದೆ ಎಂದು ಹೇಳಿದೆ.

ಕೆಲವು ತಿಂಗಳ ಹಿಂದೆ ಅನಂತ್ ಕುಮಾರ್ ಹೆಗಡೆ ಶಿರಸಿಯ ತೋಟಗಾರರ ಸೇವಾ ಸಮಿತಿ ಆಸ್ಪತ್ರೆಗೆ ನುಗ್ಗಿ ವೈದ್ಯರ ಮೇಲೆ ಹಲ್ಲೆ ನಡೆಸಿದ್ದರು. ಆ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿತ್ತು.

ವೈದ್ಯರ ಮೇಲೆ ಹಲ್ಲೆ ನಡೆಸಿರುವ ಆರೋಪ ಹೊತ್ತಿರುವವರ ವಿರುದ್ಧ ತನಿಖೆಯನ್ನು ನಡೆಸಿ, ಕ್ರಮ ಕೈಗೊಳ್ಳುವುದರ ಬದಲು ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ಕೌಶಲ್ಯಾಭಿವೃದ್ಧಿ ಖಾತೆ ನೀಡಿರುವುದರಿಂದ ಇನ್ನೊಂದು ತಪ್ಪು ಸಂದೇಶ ರವಾನೆಯಾಗಿದೆ. ಹಿಂಸಾಚಾರ ನಡೆಸುವುದನ್ನು ಉದ್ಯಮಶೀಲರಿಗೆ ಕಲಿಸುವುದು ‘ಹೊಸ ಕೌಶಲ್ಯವೇ’? ಎಂದು ಐಎಂಎ ಪ್ರಶ್ನಿಸಿದೆಯೆಂದು ವರದಿಯಾಗಿದೆ.

ಅನಂತ್ ಕುಮಾರ್ ಹೆಗಡೆ ಸಚಿವ ಸಂಪುಟ ಸೇರ್ಪಡೆಗೆ ಬೇರೆ ಬೇರೆ ಕಡೆಗಳಿಂದ ಟೀಕೆ ವ್ಯಕ್ತವಾಗಿದೆ. ಈ ಹಿಂದೆ ಇಸ್ಲಾಂ ಧರ್ಮದ ಬಗ್ಗೆ ಪ್ರಚೋದನಾಕಾರಿ ಹೇಳಿಕೆಯನ್ನು ನೀಡಿ ವ್ಯಾಪಕ ಟೀಕೆಗೊಳಗಾಗಿದ್ದರು.