ಅಹಮದಾಬಾದ್‌: ರಫೇಲ್‌ ಯುದ್ಧ ವಿಮಾನಗಳ ಖರೀದಿ ಒಪ್ಪಂದದ ಬಗ್ಗೆ ಟೀಕಿಸಿ ವರದಿ ಪ್ರಸಾರ ಮಾಡಿದ ಕಾಂಗ್ರೆಸ್‌ ಒಡೆತನದ ‘ನ್ಯಾಷನಲ್‌ ಹೆರಾಲ್ಡ್‌’ ಪತ್ರಿಕೆ ವಿರುದ್ಧ ಅನಿಲ್‌ ಅಂಬಾನಿ ಒಡೆತನದ ರಿಲಯನ್ಸ್‌ ಗ್ರೂಪ್‌ 5000 ಕೋಟಿ ರು. ಮಾನನಷ್ಟಮೊಕದ್ದಮೆ ದಾಖಲಿಸಿದೆ.

ರಿಲಯನ್ಸ್‌ ಡಿಫೆನ್ಸ್‌, ರಿಲಯನ್ಸ್‌ ಇನ್‌ಫ್ರಾಸ್ಟ್ರಕ್ಚರ್‌ ಹಾಗೂ ರಿಲಯನ್ಸ್‌ ಏರೋಸ್ಟ್ರಕ್ಚರ್‌ ಒಳಗೊಂಡ ರಿಲಯನ್ಸ್‌ ಗ್ರೂಪ್‌ ಇಲ್ಲಿನ ಸಿಟಿ ಸಿವಿಲ್‌ ಹಾಗೂ ಸೆಷನ್ಸ್‌ ನ್ಯಾಯಾಧೀಶ ಪಿ.ಜೆ.ತಮಕುವಾಲಾ ಅವರ ಬಳಿ ಈ ಅರ್ಜಿ ಸಲ್ಲಿಸಿದೆ. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಧೀಶ ತಮಕುವಾಲಾ, ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆ ಸಂಪಾದಕ ಜಾಫರ್‌ ಆಘಾ, ರಫೇಲ್‌ ಒಪ್ಪಂದದ ಕುರಿತು ಬರೆದ ವಿಶ್ವದೀಪಕ್‌ ಅವರಿಗೆ ಸೆ.7ರೊಳಗೆ ನೋಟಿಸ್‌ಗೆ ಉತ್ತರಿಸುವಂತೆ ಸೂಚಿಸಿದ್ದಾರೆ. 

ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದವನ್ನು ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸುವ 10 ದಿನಗಳ ಮುನ್ನ, ಅನಿಲ್‌ ಅಂಬಾನಿ ಅವರು ರಿಲಯನ್ಸ್‌ ಡಿಫೆನ್ಸ್‌ ಸಂಸ್ಥೆ ಸ್ಥಾಪಿಸಿದ್ದರು ಎಂಬ ತಲೆಬರಹದ ಸುದ್ದಿಯನ್ನು ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆ ಪ್ರಕಟಿಸಿತ್ತು. ಈ ಸುದ್ದಿಯಿಂದಾಗಿ ತಮ್ಮ ಸಂಸ್ಥೆಗೆ ಸರ್ಕಾರದ ಉದ್ಯಮ ಲಾಭ ಮಾಡಿಕೊಟ್ಟಿದೆ ಎಂಬ ತಪ್ಪು ಸಂದೇಶವನ್ನು ಜನರಿಗೆ ರವಾನಿಸಿದಂತೆ ಆಗಿದೆ. ಇದರಿಂದ ತಮ್ಮ ಸಂಸ್ಥೆ ಮೇಲೆ ಋುಣಾತ್ಮಕ ಪರಿಣಾಮವಾಗಲಿದೆ ಎಂದು ರಿಲಯನ್ಸ್‌ ಗ್ರೂಪ್‌ ಆರೋಪಿಸಿದೆ.