ನವದೆಹಲಿ :  ಅಸಂಘಟಿತ ಕಾರ್ಮಿಕರಿಗೆ 60 ವರ್ಷದ ನಂತರ ತಿಂಗಳಿಗೆ 3000 ರು. ಪಿಂಚಣಿ ನೀಡುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ದೇಶಾದ್ಯಂತ ನೋಂದಣಿ ಆರಂಭವಾಗಿದೆ. ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್‌-ಧನ್‌ (ಪಿಎಂಎಸ್‌ವೈಎಂ) ಹೆಸರಿನ ಈ ಯೋಜನೆಗೆ ದೇಶದೆಲ್ಲೆಡೆ ಇರುವ 3.13 ಲಕ್ಷ ಸರ್ವ ಸೇವಾ ಕೇಂದ್ರ (ಕಾಮನ್‌ ಸವೀರ್‍ಸ್‌ ಸೆಂಟರ್‌)ಗಳಲ್ಲಿ ಕಾರ್ಮಿಕರು ನೋಂದಣಿ ಮಾಡಿಸಿಕೊಳ್ಳಬಹುದು.

18ರಿಂದ 40 ವರ್ಷದ ನಡುವಿನ ಮನೆಗೆಲಸದವರು, ಬೀದಿ ಬದಿ ವ್ಯಾಪಾರಿಗಳು, ಬಿಸಿಯೂಟದ ಕೆಲಸಗಾರರು, ಹಮಾಲಿಗಳು, ಇಟ್ಟಿಗೆ-ಗಾರೆ ಕೆಲಸದವರು, ಚರ್ಮಕಾರರು, ಚಿಂದಿ ಆಯುವವರು, ಅಗಸರು, ರಿಕ್ಷಾ ಎಳೆಯುವವರು, ಭೂರಹಿತ ಕಾರ್ಮಿಕರು, ಕೃಷಿ ಕಾರ್ಮಿಕರು, ಕಟ್ಟಡ ಕಾರ್ಮಿಕರು ಹೀಗೆ ಎಲ್ಲ ವಿಧದ ಅಸಂಘಟಿತ ಕಾರ್ಮಿಕರು ಈ ಯೋಜನೆಗೆ ಅರ್ಹರಾಗಿದ್ದಾರೆ. ಇವರು ತಮ್ಮ ಆಧಾರ್‌ ಕಾರ್ಡ್‌ ಹಾಗೂ ಬ್ಯಾಂಕ್‌ ಉಳಿತಾಯ ಖಾತೆಯ (ಜನಧನ್‌ ಕೂಡ ಆದೀತು) ಪಾಸ್‌ಬುಕ್‌ ತೆಗೆದುಕೊಂಡು ಸರ್ವ ಸೇವಾ ಕೇಂದ್ರಗಳಿಗೆ ತೆರಳಿ ನೋಂದಣಿ ಮಾಡಿಸಿಕೊಳ್ಳಬಹುದು ಎಂದು ಕೇಂದ್ರ ಕಾರ್ಮಿಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಸರ್ವ ಸೇವಾ ಕೇಂದ್ರಗಳು ಹಳ್ಳಿಗಳಿಗೆ ಸಮೀಪದಲ್ಲಿರುತ್ತವೆ. ಹೆಚ್ಚಾಗಿ ಇವು ಗ್ರಾಮ ಪಂಚಾಯ್ತಿ ಮಟ್ಟದಲ್ಲೇ ಇವೆ. ಅಲ್ಲಿಗೆ ತೆರಳಿ ಮೊದಲ ತಿಂಗಳ ಪ್ರೀಮಿಯಂ ಪಾವತಿಸಿ ನೋಂದಣಿ ಮಾಡಿಸಿಕೊಳ್ಳಬೇಕು. ಆಗ ಕಾರ್ಮಿಕರಿಗೆ ವಿಶಿಷ್ಟಗುರುತಿನ ಸಂಖ್ಯೆಯಿರುವ ಈ ಯೋಜನೆಯ ಕಾರ್ಡ್‌ ನೀಡಲಾಗುತ್ತದೆ. 18 ವರ್ಷದ ಕಾರ್ಮಿಕರು 55 ರು., 29 ವರ್ಷದವರು 100 ರು. ಹಾಗೂ 40 ವರ್ಷದವರು ತಿಂಗಳಿಗೆ 200 ರು. ಪ್ರೀಮಿಯಂ ಪಾವತಿಸಿದರೆ ಕೇಂದ್ರ ಸರ್ಕಾರವೂ ಅವರ ಪಿಂಚಣಿ ಖಾತೆಗೆ ಪ್ರತಿ ತಿಂಗಳು ಅಷ್ಟೇ ಹಣ ಪಾವತಿಸುತ್ತದೆ. 60 ವರ್ಷವಾದ ನಂತರ ತಿಂಗಳಿಗೆ ಕನಿಷ್ಠ 3000 ರು. ಪಿಂಚಣಿ ಸಿಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸರ್ವ ಸೇವಾ ಕೇಂದ್ರದಲ್ಲೇ ಪಿಎಂಎಸ್‌ವೈಎಂ ಯೋಜನೆಯ ಅರ್ಜಿ ಸಿಗುತ್ತದೆ. ಎನ್‌ಪಿಎಸ್‌, ಇಎಸ್‌ಐ, ಇಪಿಎಫ್‌ ಮುಂತಾದ ಕೇಂದ್ರ ಅಥವಾ ರಾಜ್ಯ ಸರ್ಕಾರದ ಇನ್ನಾವುದೇ ಪಿಂಚಣಿ ಯೋಜನೆಗೆ ಸೇರಿರುವವರು ಈ ಯೋಜನೆಗೆ ಸೇರಲು ಬರುವುದಿಲ್ಲ. ಆರಂಭದಲ್ಲಿ ಈ ಕೇಂದ್ರಗಳಲ್ಲಿ ಮಾತ್ರ ನೋಂದಣಿ ಮಾಡಲಾಗುತ್ತದೆ. ನಂತರ ಇದಕ್ಕೆಂದೇ ವೆಬ್‌ಸೈಟ್‌ ಆರಂಭಿಸಿ ಅಥವಾ ಮೊಬೈಲ್‌ ಆ್ಯಪ್‌ ಬಿಡುಗಡೆ ಮಾಡಿ ಅಲ್ಲೂ ಕಾರ್ಮಿಕರು ನೋಂದಣಿ ಮಾಡಿಸಿಕೊಳ್ಳಲು ವ್ಯವಸ್ಥೆ ಮಾಡಲಾಗುತ್ತದೆ. ಐದು ವರ್ಷದಲ್ಲಿ 10 ಕೋಟಿ ಕಾರ್ಮಿಕರನ್ನು ಪಿಂಚಣಿಗೆ ನೋಂದಣಿ ಮಾಡಿಸಿಕೊಳ್ಳುವ ಗುರಿಯಿದೆ ಎಂದು ಮಾಹಿತಿ ನೀಡಿದ್ದಾರೆ.