ಥಿಂಫು[ಆ.18]: ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಭೂತಾನ್‌ ಪ್ರವಾಸಕ್ಕಾಗಿ ಶನಿವಾರ ಭೂತಾನ್‌ಗೆ ಆಗಮಿಸಿದರು. ಭೇಟಿಯ ವೇಳೆ ಉಭಯ ದೇಶಗಳ ಸಂಬಂಧವನ್ನು ಗಟ್ಟಿಗೊಳಿಸುವ ನಿಟ್ಟಿನಿಂದ ಭೂತಾನ್‌ ನಾಯಕರ ಜೊತೆ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಇದು ಮೋದಿ ಅವರ ಎರಡನೇ ಹಾಗೂ ಮರುಆಯ್ಕೆ ಆದ ಬಳಿಕ ಮೊದಲ ಭೂತಾನ್‌ ಭೇಟಿಯಾಗಿದೆ.

ಭೂತಾನ್‌ಗೆ ಆಗಮಿಸಿದ ಮೋದಿ ಅವರಿಗೆ ಕೆಂಪು ಹಾಸಿನ ಸ್ವಾಗತಕೋರಲಾಯಿತು. ಭೂತಾನ್‌ ಪ್ರಧಾನಿ ಲೋಟೆ ತ್ಸೆರಿಂಗ್‌ ಅವರು ಖುದ್ದು ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಮೋದಿ ಅವರನ್ನು ಬರಮಾಡಿಕೊಂಡರು. ಪಾರೋ ಪಟ್ಟಣದಿಂದ ರಾಜಧಾನಿ ಥಿಂಫುವಿಗೆ ತೆರಳುವ ಮಾರ್ಗದ ಉದ್ದಕ್ಕೂ ಜನರು ಭಾರತ ಹಾಗೂ ಭೂತಾನ್‌ ರಾಷ್ಟ್ರ ಧ್ವಜ ಹಿಡಿದು ಮೋದಿ ಅವರನ್ನು ಬರಮಾಡಿಕೊಂಡಿದ್ದು ವಿಶೇಷವಾಗಿತ್ತು. ಭೂತಾನ್‌ ಅರಮನೆ ತಾಶಿಚೋಡ್ಜಾಂಗ್‌ನಲ್ಲಿ ಮೋದಿ ಸಾಂಪ್ರದಾಯಿಕ ಗೌರವ ವಂದನೆ ಸ್ವೀಕರಿಸಿದರು.

ಬಳಿಕ ಮೋದಿ ಭೂತಾನ್‌ ಪ್ರಧಾನಿ ಲೋಟೆ ತ್ಸೆರಿಂಗ್‌ ಅವರ ಜೊತೆ ಉಭಯ ದೇಶಗಳ ಸಂಬಂಧ ಸುಧಾರಣೆಯ ನಿಟ್ಟಿನಿಂದ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಈ ವೇಳೆ ಶಿಕ್ಷಣ, ಬಾಹ್ಯಾಕಾಶ ಸಂಶೋಧನೆ ಸೇರಿದಂತೆ 10 ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಮಾತುಕತೆಯ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೋದಿ, ಭೂತಾನ್‌ ರೀತಿಯ ಸ್ನೇಹಿತನನ್ನು ಹಾಗೂ ನೆರೆಹೊರೆಯ ದೇಶವನ್ನು ಯಾರು ತಾನೆ ಬಯಸುವುದಿಲ್ಲ. ಭೂತಾನ್‌ ಅಭಿವೃದ್ಧಿಯಲ್ಲಿ ಭಾರತವೂ ಭಾಗಿಯಾಗಿರುವುದು ನಮಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಬಣ್ಣಿಸಿದರು. ಬಾಹ್ಯಾಕಾಶ ತಂತ್ರಜ್ಞಾನದ ಮೂಲಕ ಭೂತಾನ್‌ನಲ್ಲಿ ಸಂವಹನ, ಪ್ರಸಾರ ಹಾಗೂ ವಿಪತ್ತು ನಿರ್ವಹಣೆಗೆ ನೆರವು ನೀಡಲು ಭಾರತ ಸಿದ್ಧವಿದೆ ಎಂದು ಹೇಳಿದರು.

ಇದೇ ವೇಳೆ ಮಂಗ್‌ಡೆಚು ಜಲವಿದ್ಯುತ್‌ ಸ್ಥಾವರವನ್ನು ಮೋದಿ ಉದ್ಘಾಟಿಸಿದರು. ಅಲ್ಲದೇ ಭಾರತ ಹಾಗೂ ಭೂತಾನ್‌ ನಡುವಿನ 5 ದಶಕಗಳ ಜಲವಿದ್ಯುತ್‌ ಸಹಕಾರದ ಧ್ಯೋತಕವಾಗಿ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದರು.

ರುಪೇ ಕಾರ್ಡ್‌ ಬಿಡುಗಡೆ

ತಮ್ಮ ಭೇಟಿಯ ವೇಳೆ ಭೂತಾನ್‌ನಲ್ಲಿ ರುಪೇ ಕಾರ್ಡ್‌ ಅನ್ನು ಮೋದಿ ಬಿಡುಗಡೆ ಮಾಡಿದರು. 1629ರಲ್ಲಿ ನಿರ್ಮಾಣ ಆದ ಸಿಮ್ತೋಖಾ ಜೋಂಗ್‌ ಬೌದ್ಧ ಸ್ಮಾರಕದಲ್ಲಿ ರುಪೇ ಕಾರ್ಡ್‌ ಬಳಸಿ ವಸ್ತುವೊಂದನ್ನು ಖರೀದಿಸಿದರು.