ಬೆಂಗಳೂರು :  ರಾಜ್ಯದ ಕೆಲವೆಡೆ ಮುಂಗಾರು ಪ್ರಾರಂಭವಾದ ಎರಡು ತಿಂಗಳಲ್ಲೇ ಭರ್ಜರಿ ಮಳೆಯಾಗಿರುವುದರಿಂದ ಜಲಸಮೃದ್ಧಿ ಕಂಗೊಳಿಸಿದೆ. ನದಿ ತೊರೆಗಳಂತೂ ತುಂಬಿ ಹರಿಯುತ್ತಿರುವುದರಿಂದ ಪ್ರಮುಖ ಜಲಾಶಯ, ಕೆರೆತೊರೆಗಳೆಲ್ಲಾ ಅವಧಿಗೆ ಮುನ್ನವೇ ಭರ್ತಿಯಾಗಿವೆ. 

ನಾಡಿನ ಜಲಪಾತಗಳೂ ಧುಮ್ಮುಕ್ಕಿ ಹರಿದು ಅಭೂತಪೂರ್ವ ಲೋಕವನ್ನೇ ಸೃಷ್ಟಿಸಿವೆ. ಈ ಸುಂದರ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧ ಜಲಪಾತ, ಜಲಾಶಯಳಿಗೆ ಪ್ರವಾಸಿಗರು ದೊಡ್ಡ ಸಂಖ್ಯೆಯಲ್ಲಿ ದಾಂಗುಡಿ ಯಿಡುತ್ತಿದ್ದಾರೆ. ಹೀಗಾಗಿ ಪ್ರವಾಸದ ಋತು ಅಲ್ಲದಿದ್ದರೂ ವಾರಾಂತ್ಯವಾದ ಶನಿವಾರ, ಭಾನುವಾರಗಳಂದು ಜಲಾಶಯಗಳತ್ತ ಈಗ ಜನಸಾಗರವೇ ಹರಿದು ಬರುತ್ತಿದೆ. 

ಉತ್ತರ ಕನ್ನಡ ಜಿಲ್ಲೆಯ ಗಡಿಯಲ್ಲಿ ಬರುವ ಮತ್ತೊಂದು ವಿಶ್ವಪ್ರಸಿದ್ಧ ಜಲಪಾತವಾದ ದೂದ್‌ಸಾಗರ ಜಲಪಾತವೂ ಕಣ್ಣಿಗೆ ಹಬ್ಬ ವನ್ನುಂಟುಮಾಡಿದೆ. ಇದರ ಮುಂಭಾಗದಿಂದಲೇ ಹಾದುಹೋಗುವ ಕೊಂಕಣ ರೈಲ್ವೆ ಮಾರ್ಗದಲ್ಲಿ ರೈಲುಗಳ ವೇಗವನ್ನು ನಿಧಾನ ಗೊಳಿಸುವುದರಿಂದ ಪ್ರಯಾಣಿಕರೂ ಈ ಜಲೋತ್ಸವವನ್ನು ಸಂಭ್ರಮಿಸುತ್ತಿದ್ದಾರೆ. 

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಕಾವೇರಿ ನದಿಗೆ ಕಟ್ಟಿರುವ ಕೃಷ್ಣರಾಜಸಾಗರ ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಕಳೆದೆರಡು ವಾರಗಳಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಶನಿವಾರ, ಭಾನುವಾರಗಳಂದು ಸುಮಾರು 30 ರಿಂದ 40  ಸಾವಿರ ಪ್ರವಾಸಿಗರು ಭೇಟಿ ನೀಡಿ ಹೊರಹರಿವಿನ ನೀರಿನ ರಮಣೀಯತೆಯ ದೃಶ್ಯವನ್ನು ಕಣ್ತುಂಬಿಕೊಂಡಿದ್ದಾರೆ. ಕಬಿನಿ ಮತ್ತು ಕೃಷ್ಣರಾಜಸಾಗರ ಜಲಾಶಯದಿಂದ ಹರಿದುಬರಲಿರುವ 50 ರಿಂದ 60 ಸಾವಿರ ಕ್ಯುಸೆಕ್ ನೀರು ಶಿವನಸಮುದ್ರದ ಗಗನಚುಕ್ಕಿ ಮತ್ತು ಭರಚುಕ್ಕಿಯಲ್ಲಿ ಧುುಮ್ಮಿಕ್ಕಿ ಹರಿಯುತ್ತಿರು ವುದರಿಂದ ಅಲ್ಲಿ ಜನಜಂಗುಳಿ ಏರ್ಪಟ್ಟಿದೆ. ಕೆ.ಆರ್.ಪೇಟೆ ತಾಲೂಕಿನ ಹೇಮಗಿರಿ ಸಮೀಪ ಹೇಮಾವತಿ ಜಲಪಾತ ನೋಡಲು ಪ್ರವಾಸಿಗರು ಶನಿವಾರ ಮತ್ತು ಭಾನುವಾರ ಭೇಟಿ ನೀಡಿದ್ದರು. ಲಕ್ಷ್ಮಣತೀರ್ಥ, ಕಾವೇರಿ ಮತ್ತು ಹೇಮಾವತಿ ನದಿಯ ಸಂಗಮಕ್ಷೇತ್ರವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಹರಿದುಬರುತ್ತಿದ್ದಾರೆ.

ಟಿಬಿ ಡ್ಯಾಂನತ್ತ ಲಕ್ಷೋಪಾದಿ ಪ್ರವಾಸಿಗರು: ಬಳ್ಳಾರಿ ಜಿಲ್ಲೆಯಲ್ಲಿರುವ ತುಂಗಭದ್ರಾ ಜಲಾಶಯದ ಎಲ್ಲ 33 ಗೇಟುಗಳನ್ನು ತೆರೆದ ಹಿನ್ನೆಲೆಯಲ್ಲಿ ಮುನಿರಾಬಾದ್‌ಗೆ ಬೆಳಗ್ಗೆಯಿಂದ ಸಂಜೆವರೆಗೆ ಒಂದು ಲಕ್ಷಕ್ಕೂ ಅಧಿಕ ಪ್ರವಾಸಿಗರು ಆಗಮಿಸಿ ಜಲಾಶಯವನ್ನು ವೀಕ್ಷಿಸಿದರು ಎಂದು ಪೊಲೀಸ್ ಇಲಾಖೆಯ ಮೂಲಗಳು ಕನ್ನಡಪ್ರಭಕ್ಕೆತಿಳಿಸಿವೆ. ಗುರುವಾರ, ಶುಕ್ರವಾರ, ಶನಿವಾರ ಸುಮಾರು 40 ಸಾವಿರ ಪ್ರವಾಸಿಗರು ಡ್ಯಾಂಗೆ ಭೇಟಿ ನೀಡಿ ಜಲಾಶಯದ ಸೊಬಗನ್ನು ವೀಕ್ಷಿಸಿದರು.

ವಿಜಯಪುರ ಜಿಲ್ಲೆಯ ಆಲಮಟ್ಟಿ ಲಾಲ್‌ಬಹದ್ದೂರ ಶಾಸ್ತ್ರಿ ಜಲಾಶಯಕ್ಕೆ ಬಣ್ಣಬಣ್ಣದ ಎಲ್‌ಇಡಿ ಬಲ್ಬ್ ಅಳವಡಿಸುವ ಮೂಲಕ ಬೆಳಕಿನ ಚಿತ್ತಾರದ ಮೂಲಕ ಧುಮ್ಮುಕ್ಕುತ್ತಿರುವ ನೀರಿನ ಸೆಲೆ ವೀಕ್ಷಿಸಲು ಜನಜಂಗುಳಿಯೇ ಇತ್ತ ಧಾವಿಸಿ ಕಣ್ಣುತುಂಬಿಕೊಳ್ಳುತ್ತಿದೆ. ಭಾನುವಾರ ಸುಮಾರು 10 ಸಾವಿರಕ್ಕೂ ಹೆಚ್ಚು ಜನ ಆಲಮಟ್ಟಿಗೆ ಆಗಮಿಸಿ ಇಲ್ಲಿನ ನಿಸರ್ಗ ರಮಣೀಯ ದೃಶ್ಯಕ್ಕೆ ಸಾಕ್ಷಿಯಾದರು.

ಜೋಗದತ್ತ ಪ್ರವಾಸಿಗರ ದಂಡು 

ಶಿವಮೊಗ್ಗ ಜಿಲ್ಲೆಯಲ್ಲಿರುವ ವಿಶ್ವವಿಖ್ಯಾತ ಜೋಗ ಜಲಪಾತವನ್ನು ವೀಕ್ಷಿಸಲು ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ಭಾನುವಾರದಂದುಸುಮಾರು 30 ರಿಂದ 40  ಸಾವಿರ ಮಂದಿ ವೀಕ್ಷಣೆ ಮಾಡಿದರು. ಇಲ್ಲಿಗೆ ಸುಮಾರು 6 ರಿಂದ 8 ಸಾವಿರದಷ್ಟು ವಾಹನಗಳು ಬಂದಿದ್ದು ಪಾರ್ಕಿಂಗ್ ಮಾಡಲು ಪ್ರವಾಸಿಗರು ಪರದಾಡು ವಂತಾಯಿತು. ಮಳೆಯು ಸ್ವಲ್ಪ ಬಿಡುವು ಕೊಟ್ಟಿದ್ದರಿಂದ ಪ್ರವಾಸಿಗರು ಜಲಪಾತದ ಸೊಬಗನ್ನು ಕಂಡು ಸಂಭ್ರಮಪಟ್ಟರು. ಬೆಳಗಾವಿ ಜಿಲ್ಲೆಯ ಗೋಕಾಕ್ ಫಾಲ್ಸ್ ವೀಕ್ಷಣೆಗೆ 50 ಸಾವಿರಕ್ಕೂ ಅಧಿಕ ಪ್ರವಾಸಿಗರು ಆಗಮಿಸಿದ್ದರು. 

ನಿರೀಕ್ಷೆಗೂ ಮೀರಿ ಜನಸಂದಣಿ ಆದ ಕಾರಣ ಇಲ್ಲೂ ಟ್ರಾಫಿಕ್ ಕಿರಿಕಿರಿ ಉಂಟಾಗಿ ಪ್ರವಾಸಿಗರು ಹೈರಾಣಾದರು. ಪಿಎಸೈ ಮತ್ತು ಎಎಸೈ ಸೇರಿದಂತೆ 10 ಪೊಲೀಸ್ ಕಾನ್ ಸ್ಟೇಬಲ್‌ಗಳು ಟ್ರಾಫಿಕ್ ಸಮಸ್ಯೆ ಪರಿಹರಿಸಲು ಸುಮಾರು 5 ಗಂಟೆಗೂ ಹೆಚ್ಚು ಕಾಲ ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿತ್ತು.