ನವದೆಹಲಿ[ಮೇ.25]: ಈ ಬಾರಿಯ ಚುನಾವಣೆಯಲ್ಲಿ ಹಿಂದೆಂದಿಗಿಂತಲೂ ಅತಿಹೆಚ್ಚು ಸಂಖ್ಯೆಯ ಮಹಿಳಾ ಅಭ್ಯರ್ಥಿಗಳು ಲೋಕಸಭೆಗೆ ಆಯ್ಕೆಯಾಗಿದ್ದಾರೆ. ದೇಶದ 542 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ 78 ಮಹಿಳಾ ಅಭ್ಯರ್ಥಿಗಳು ವಿವಿಧ ಪಕ್ಷಗಳಿಂದ ಲೋಕಸಭೆ ಪ್ರವೇಶ ಮಾಡಿದ್ದಾರೆ. ಈ ಮೂಲಕ 1952ರಿಂದ ಇದುವರೆಗೂ ಇದೇ ಮೊದಲ ಬಾರಿಗೆ ಶೇ.14ಕ್ಕಿಂತ ಹೆಚ್ಚು ಪ್ರಮಾಣದ ಮಹಿಳೆಯರು ಲೋಕಸಭೆ ಪ್ರವೇಶಿಸಿದಂತಾಗಿದೆ. ಇದರಲ್ಲಿ ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳದಿಂದ ತಲಾ 11 ಮಂದಿ ಮಹಿಳೆಯರು ಸಂಸತ್ತಿಗೆ ಆಯ್ಕೆಯಾಗಿದ್ದಾರೆ.

ಸುಮಲತಾ ಗೆಲುವಿಗೆ ಇಲ್ಲಿವೆ 10 ಕಾರಣಗಳು!

41 ಹಾಲಿ ಸಂಸದರ ಪೈಕಿ ಸೋನಿಯಾ ಗಾಂಧಿ, ಹೇಮಾ ಮಾಲಿನಿ, ಕಿರಣ್‌ ಖೇರ್‌ ಸೇರಿದಂತೆ ಒಟ್ಟು 27 ಮಹಿಳೆಯರು ತಮ್ಮ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ. ಇನ್ನು ಬಿಜೆಪಿಯ ಸಾಧ್ವಿ ಪ್ರಜ್ಞಾ ಸಿಂಗ್‌ ಠಾಕೂರ್‌ ಹಾಗೂ ಸ್ಮೃತಿ ಇರಾನಿ ಅವರು ಸಹ ತಮ್ಮ ಎದುರಾಳಿಗಳಾದ ಕ್ರಮವಾಗಿ ದಿಗ್ವಿಜಯ್‌ ಸಿಂಗ್‌ ಹಾಗೂ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ಗೆಲುವು ಸಾಧಿಸಿ ಲೋಕಸಭೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕರ್ನಾಟಕದಿಂದ ಇಬ್ಬರು ಮಹಿಳೆಯರು

ಕರ್ನಾಟಕದಿಂದಲೂ ಇಬ್ಬರು ಮಹಿಳೆಯರು ಸಂಸತ್ತು ಪ್ರವೇಶಿಸುತ್ತಿದ್ದು, ಇವರಲ್ಲಿ ಉಡುಪಿ ಚಿಕ್ಕಮಗಳೂರು ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಗೆದ್ದ ಶೋಭಾ ಕರಂದ್ಲಾಜೆ ಹಾಗೂ ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದ ಸುಮಲತಾ ಇದ್ದಾರೆ. ಶೋಭಾ ಈ ಹಿಂದೆಯೂ ಸಂಸದೆಯಾಗಿ ಆಯ್ಕೆಯಾಗಿದ್ದರು. ಆದರೆ ಸುಮಲತಾ ಇದೇ ಮೊದಲ ಬಾರಿ ಸಂಸತ್ತು ಪ್ರವೇಶಿಸುತ್ತಿದ್ದಾರೆ. ಅಲ್ಲದೇ ಸಂಸತ್ತು ಪ್ರವೇಶಿಸುತ್ತಿರುವ ಮೊದಲ ಮಹಿಳಾ ಪಕ್ಷೇತರ ಸಂಸದೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಮಂಡ್ಯದಲ್ಲಿ ಗೆದ್ದ ಸುಮಲತಾ: ವಿಭಿನ್ನವಾಗಿ ಸಂಭ್ರಮಿಸಿದ ಅಂಬಿ ಅಭಿಮಾನಿ!

2014ರ ಲೋಕಸಭಾ ಚುನಾವಣೆಯಲ್ಲಿ 64 ಮಹಿಳೆಯರು ಆಯ್ಕೆಯಾಗಿದ್ದರೆ, 2009ರಲ್ಲಿ 52 ಮಹಿಳೆಯರು ಸಂಸತ್ತಿಗೆ ಆಯ್ಕೆಯಾಗಿದ್ದರು. ಆದರೆ, 2019ರ 17ನೇ ಅವಧಿಯ ಸಂಸತ್ತಿಗೆ 78 ಮಹಿಳೆಯರು ಆಯ್ಕೆಯಾಗಿದ್ದಾರೆ. ಈ ಬಾರಿ ಕಾಂಗ್ರೆಸ್‌ನಿಂದ 54 ಮತ್ತು ಬಿಜೆಪಿಯಿಂದ 53 ಸೇರಿದಂತೆ ದೇಶಾದ್ಯಂತ ಒಟ್ಟು 724 ಮಹಿಳೆಯರು ಲೋಕಸಭೆ ಚುನಾವಣೆ ಅಖಾಡಕ್ಕೆ ಇಳಿದಿದ್ದರು.