ಬೆಳಗಾವಿ (ಡಿ. 19): ಸಹಕಾರ ಸಂಘಗಳು ಮತ್ತು ಬ್ಯಾಂಕ್‌ಗಳಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಇಲ್ಲದಿರುವ ಹಿನ್ನೆಲೆಯಲ್ಲಿ ಸಹಕಾರ ಕಾನೂನಿಗೆ ತಿದ್ದುಪಡಿ ತಂದು ಸ್ಥಳೀಯ ಸಂಸ್ಥೆಗಳ ಮಾದರಿಯಲ್ಲಿಯೇ ಮೀಸಲಾತಿ ನೀಡಬೇಕು ಎಂದು ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯು ಶಿಫಾರಸು ಮಾಡಿದೆ.

ಸಮಿತಿ ಅಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿ ಕೆಳಮನೆಯಲ್ಲಿ ವರದಿಯನ್ನು ಮಂಡಿಸಿದರು. ಸಹಕಾರ ಸಂಘಗಳು ಮತ್ತು ಬ್ಯಾಂಕ್‌ಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಇಲ್ಲದಿರುವ ಕಾರಣ ಎಸ್‌ಸಿ/ಎಸ್‌ಟಿ ಜನಾಂಗದವರು ಅವಕಾಶ ವಂಚಿತರಾಗುತ್ತಿದ್ದಾರೆ. ಹೀಗಾಗಿ ಸಹಕಾರ ಕಾನೂನಿಗೆ ತಿದ್ದುಪಡಿ ತಂದು ಸ್ಥಳೀಯ ಸಂಸ್ಥೆಗಳ ಮಾದರಿಯಲ್ಲಿ ಮೀಸಲಾತಿ ಕಲ್ಪಿಸಬೇಕು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಎಸ್‌ಸಿ/ಎಸ್‌ಟಿಯ ಪ್ರತಿಯೊಬ್ಬ ಷೇರುದಾರರಿಗೂ ಮತದಾನ ಹಕ್ಕನ್ನು ನೀಡಬೇಕು ಎಂದು ಇಲಾಖೆಯಿಂದ ಎಲ್ಲಾ ಸಹಕಾರ ಸಂಘಗಳಿಗೆ ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ ನೀಡಬೇಕು ಎಂದು ಹೇಳಲಾಗಿದೆ.

ಸಮಿತಿಯ ಶಿಫಾರಸ್ಸಿನ ಪ್ರಮುಖ ಅಂಶಗಳು:

- ಸರ್ಕಾರಿ ಡಿ, ಸಿ ವೃಂದದ ನೌಕರರ ಮಕ್ಕಳಿಗೆ ಅನುಕೂಲವಾಗುವಂತೆ ವಿದ್ಯಾರ್ಥಿ ವೇತನ ಪಡೆಯಲು ವಾರ್ಷಿಕ ಆದಾಯ ಮಿತಿಯನ್ನು ಹೆಚ್ಚಿಸಬೇಕು. ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಬಯಸುವುದಕ್ಕೆ ಇರುವ ವಾರ್ಷಿಕ ಅದಾಯ ಮಿತಿಯನ್ನು ಸಹ ಹೆಚ್ಚಿಸಬೇಕು.

- ಗೋಮಾಳ, ಗ್ರಾಮಠಾಣ ಮತ್ತು ಅರಣ್ಯ ಜಮೀನುಗಳಲ್ಲಿ ವಾಸಿಸುತ್ತಿರುವ ಎಸ್‌ಸಿ, ಎಸ್‌ಟಿ ಜನರಿಗೆ ವಿಶೇಷ ಪ್ರಕರಣವೆಂದು ಪರಿಗಣಿಸಿ ನಿವೇಶನಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು.

- ಶಾಲಾ ಮಕ್ಕಳಿಗೆ ಲಿಡಕರ್‌ ಸಂಸ್ಥೆಯಿಂದ ಶೂ ಮತ್ತು ಬೆಲ್ಟ್‌ಗಳನ್ನು ಕಡ್ಡಾಯವಾಗಿ ಖರೀದಿ ಮಾಡಲು ಸರ್ಕಾರ ಸುತ್ತೋಲೆ ಹೊರಡಿಸಬೇಕು. ಲಿಡಕರ್‌ ಸಂಸ್ಥೆಯ ಪುನಃಶ್ಚೇತನಕ್ಕಾಗಿ ಹೆಚ್ಚಿನ ಅನುದಾನವನ್ನು ಒದಗಿಸಬೇಕು ಮತ್ತು ನಷ್ಟವಾಗದಂತೆ ಕ್ರಮ ಜರುಗಿಸಬೇಕು.

- ಭೂ ಒಡೆತನ ಯೋಜನೆಯಡಿ ಭೂಮಿ ನೀಡಲು ಇರುವ ಅರ್ಹತೆಯನ್ನು ಸಡಿಲಗೊಳಿಸಿ ಹೆಚ್ಚು ಫಲಾನುಭವಿಗಳಿಗೆ ಇದರ ಪ್ರಯೋಜನವನ್ನು ಒದಗಿಸುವಂತೆ ಕ್ರಮ ಕೈಗೊಳ್ಳಬೇಕು.

- ದೇವದಾಸಿ ಯುವತಿಯರಿಗೆ ಬಡ್ಡಿ ರಹಿತ ಸಾಲವನ್ನು ನೀಡಲು, ಸೌಲಭ್ಯಗಳನ್ನು ದುಪ್ಪಟ್ಟು ಮಾಡಲು ಮತ್ತು ದೇವದಾಸಿ ಮಹಿಳೆಯರನ್ನು ಮದುವೆಯಾಗುವಂತಹವರಿಗೆ ಅಂತರ್ಜಾತಿ ವಿವಾಹ ಪ್ರೋತ್ಸಾಹ ಧನ ನೀಡಬೇಕು.

- ರಾಷ್ಟ್ರೀಯ ಆರ್ಥಿಕ ಅಭಿವೃದ್ಧಿ ನಿಗಮದ ಮಾದರಿಯಲ್ಲಿಯೇ ರಾಜ್ಯದಲ್ಲಿಯೂ ಸಹ ನಿಗಮ ಸ್ಥಾಪಿಸಿ ಈ ನಿಗಮದಿಂದ ಫಲಾನುಭವಿಗಳಿಗೆ ನೇರ ಸಾಲ ವಿತರಣೆ ಮಾಡಬೇಕು.

- ಹೊರಗುತ್ತಿಗೆ ಅಧಾರ ಮೇಲೆ ಸಿ ಮತ್ತು ಡಿ ವೃಂದದ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವ ವೇಳೆ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಮೀಸಲಾತಿಗನುಸಾರವಾಗಿ ನೇಮಕ ಮಾಡಿಕೊಳ್ಳಬೇಕು.

- ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸುವವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡಿ, ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಬೇಕು.

- ಕೃಷಿ ಮಾರುಕಟ್ಟೆಸಮಿತಿಯು ಮಳಿಗೆಗಳನ್ನು ಹಂಚುವಾಗ ಎಸ್‌ಸಿ/ಎಸ್‌ಟಿ ಜನಾಂಗದ ನಿರುದ್ಯೋಗಿ ಯುವಕರಿಗೆ ಮೀಸಲಾತಿ ಇರಬೇಕು. ಸೌಲಭ್ಯಗಳು ದುರುಪಯೋಗವಾಗದಂತೆ ಎಚ್ಚರ ವಹಿಸಬೇಕು.