ಬಿಎಸ್ ಯಡಿಯೂರಪ್ಪ ಅವರ ಪ್ರಮಾಣ ವಚನಕ್ಕೆ ಕ್ಷಣಗಣನೆ ಆರಂಭವಾಗಿದೆ. ರಾಜಭವನದಲ್ಲಿ ಯಡಿಯೂರಪ್ಪ ಪ್ರಮಾಣ ವಚನ ಸಮಾರಂಭಕ್ಕೆ ರಾಜೀನಾಮೆ ಕೊಟ್ಟ ಶಿವಾಜಿನಗರ ಶಾಸಕ ರೋಶನ್ ಬೇಗ್ ಆಗಮಿಸಿದ್ದಾರೆ.
ಬೆಂಗಳೂರು[ಜು. 26] ಬಿಎಸ್‌ವೈ ಪ್ರಮಾಣ ವಚನಕ್ಕೂ ಮುನ್ನವೇ ರಾಜಭವನಕ್ಕೆ ಶಿವಾಜಿನಗರದ ಶಾಸಕ ರೋಶನ್ ಬೇಗ್ ಆಗಮಿಸಿದ್ದಾರೆ. ಇದು ಸಹಜವಾಗಿಯೇ ಒಂದಿಷ್ಟು ಪ್ರಶ್ನೆಗಳನ್ನು ತೆಗೆದಿರಿಸಿದೆ.
ರಾಜಭವನದ ಬಳಿ ಆಗಮಿಸಿದ ರೋಶನ್ ಬೇಗ್ ಅವರನ್ನು ಸಾಗರ ಶಾಸಕ ಹರತಾಳು ಹಾಲಪ್ಪ ಬರಮಾಡಿಕೊಂಡರು. ರೋಶನ್ ಬೇಗ್ ನಂತರ ನಗುತ್ತಲೇ ಮುಂದೆ ಹೆಜ್ಜೆ ಹಾಕಿದರು. ರಾಜೂ ಗೌಡ, ಸಿಪಿ ಯೋಗೇಶ್ವರ ಅವರು ಸಹ ರೋಶನ್ ಬೇಗ್ ಅವರೊಂದಿಗೆ ಮಾತನಾಡಿದರು.
ದೋಸ್ತಿಗಳು ಬಿಎಸ್ ವೈ ಪ್ರಮಾಣ ವಚನಕ್ಕೆ ತೆರಳುವುದಿಲ್ಲ ಎಂದು ಮೊದಲೆ ಹೇಳಿದ್ದರು. ರೋಶನ್ ಬೇಗ್ ಅವರನ್ನು ಕಾಂಗ್ರೆಸ್ ಅಮಾನತು ಮಾಡಿತ್ತು. ಪ್ರಮಾಣ ವಚನ ಸಮಾರಂಭದಲ್ಲಿ ಕಾಣಿಸಿಕೊಂಡಿರುವ ರೋಶನ್ ಬೇಗ್ ಕಾಂಗ್ರೆಸ್ ನಾಯಕರಿಗೆ ಒಂದು ಸೂಚನೆ ರವಾನಿಸಿದ್ದಾರೆ.
ಪ್ರಮಾಣ ವಚನಕ್ಕೆ ಹೊರಟ ಬಿಎಸ್‌ವೈಗೆ ಸಿದ್ದು ನೇರ ಪ್ರಶ್ನೆ
ಗುರುವಾರ ರಾತ್ರಿ ಅತೃಪ್ತ ಶಾಸಕರ ಕುರಿತು ತೀರ್ಪು ಪ್ರಕಟಿಸಿದ್ದ ಸ್ಪೀಕರ್ ರಮೇಶ್ ಕುಮಾರ್, ರಮೇಶ್ ಜಾರಕಿಹೊಳಿ. ಆರ್. ಶಂಕರ್ ಮತ್ತು ಮಹೇಶ್ ಕುಮಟಲ್ಳಿ ಅವರನ್ನು ಅನರ್ಹ ಮಾಡಿದ್ದರು. ಆದರೆ ಇದೀಗ ರೋಶನ್ ಬೇಗ್ ಕಾಣಿಸಿಕೊಂಡಿದ್ದು ನೀವು ಏನಾದರೂ ಮಾಡಿಕೊಳ್ಳಿ ಎಂಬ ಸವಾಲನ್ನು ಬಹಿರಂಗವಾಗಿಯೇ ಹಾಕಿದಂತಿದೆ.
ಕಾಂಗ್ರೆಸ್ ವಿರುದ್ಧ ಮಾತನಾಡುತ್ತ ಬಂದಿದ್ದ ಕೆಎನ್ ರಾಜಣ್ಣ ಸಹ ಪ್ರಮಾಣ ವಚನ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದಾರೆ. ಜತೆಗೆ ಗಂಗಾಂಬಿಕೆ ಸಹ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.

