Asianet Suvarna News Asianet Suvarna News

ಸ್ಪೀಕರ್ ವಿರುದ್ಧವೇ ತಿರುಗಿ ಬಿದ್ದ 10 ಶಾಸಕರು : ಇಂದು ಮಹತ್ವದ ಆದೇಶ

ಕರ್ನಾಟಕದ ರೆಬೆಲ್ ಶಾಸಕರು ಇದೀಗ ಸ್ಪೀಕರ್ ವಿರುದ್ಧವೇ ಗರಂ ಆಗಿದ್ದಾರೆ. ಅರ್ಹತೆಯೋ ಅನರ್ಹತೆಯೋ ಇಂದು ಮಹತ್ವದ ಆದೇಶ ಹೊರಬೀಳಲಿದೆ. 

Rebel Karnataka MLAs Moved To Supreme Court
Author
Bengaluru, First Published Jul 11, 2019, 7:30 AM IST

ನವದೆಹಲಿ [ಜು.11] :   ರಾಜೀನಾಮೆ ಅಂಗೀಕಾರ ವಿಚಾರವಾಗಿ ಕಾಂಗ್ರೆಸ್‌-ಜೆಡಿಎಸ್‌ನ ಅತೃಪ್ತ ಶಾಸಕರು ಮತ್ತು ಸ್ಪೀಕರ್‌ ರಮೇಶ್‌ ಕುಮಾರ್‌ ನಡುವಿನ ತಿಕ್ಕಾಟ ಈಗ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ನಮ್ಮ ರಾಜೀನಾಮೆಯನ್ನು ಸ್ಪೀಕರ್‌ ದುರುದ್ದೇಶಪೂರ್ವಕವಾಗಿ ಅಂಗೀಕರಿಸಿಲ್ಲ, ಅವರಿಗೆ ನಮ್ಮನ್ನು ಅನರ್ಹಗೊಳಿಸುವ ಉದ್ದೇಶವಿದ್ದಂತಿದೆ ಎಂದು ಹೇಳಿ ಹತ್ತು ಮಂದಿ ಬಂಡಾಯ ಶಾಸಕರು ಸುಪ್ರೀಂ ಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದ್ದು, ಗುರುವಾರ ಈ ಕುರಿತ ವಿಚಾರಣೆ ನಡೆಯಲಿದೆ. ಅತೃಪ್ತ ಶಾಸಕರ ರಾಜೀನಾಮೆಯಿಂದ ಸರ್ಕಾರ ಅಲ್ಪಮತಕ್ಕೆ ಕುಸಿದಿರುವ ಈ ಹೊತ್ತಿನಲ್ಲಿ ಎಲ್ಲರ ಕುತೂಹಲ ಈಗ ಸುಪ್ರೀಂ ಕೋರ್ಟ್‌ನ ಆದೇಶತ್ತ ನೆಟ್ಟಿದೆ.

ಮೈತ್ರಿ ಸರ್ಕಾರದ ವಿರುದ್ಧ ಬಂಡಾಯವೆದ್ದು ಸ್ಪೀಕರ್‌ ಕಚೇರಿಗೆ ಹಾಗೂ ರಾಜ್ಯಪಾಲರಿಗೂ ರಾಜೀನಾಮೆ ನೀಡಿ ಮುಂಬೈ ಸೇರಿರುವ ಕಾಂಗ್ರೆಸ್‌, ಜೆಡಿಎಸ್‌ನ ಶಾಸಕರಾದ ಪ್ರತಾಪ್‌ಗೌಡ ಪಾಟೀಲ್, ರಮೇಶ್‌ ಜಾರಕಿಹೊಳಿ, ಬೈರತಿ ಬಸವರಾಜು, ಬಿ.ಸಿ.ಪಾಟೀಲ್, ಶಿವಾನಂದ ಹೆಬ್ಬಾರ್‌, ಎಸ್‌.ಟಿ.ಸೋಮಶೇಖರ್‌, ಎಚ್‌.ವಿಶ್ವನಾಥ್‌, ಮಹೇಶ್‌ ಕುಮಟಳ್ಳಿ, ಕೆ.ಗೋಪಾಲಯ್ಯ, ನಾರಾಯಣ ಗೌಡ ಸುಪ್ರೀಂ ಕೋರ್ಟ್‌ಗೆ ಬುಧವಾರ ರಿಟ್‌ ಅರ್ಜಿ ಸಲ್ಲಿಸಿದ್ದು, ನಮ್ಮ ರಾಜೀನಾಮೆಯನ್ನು ಸ್ಪೀಕರ್‌ ದುರುದ್ದೇಶಪೂರ್ವಕವಾಗಿ ಅಂಗೀಕರಿಸಿಲ್ಲ ಎಂದು ದೂರಿದ್ದಾರೆ. ಜತೆಗೆ, ನಮ್ಮ ರಾಜೀನಾಮೆ ಅಂಗೀಕರಿಸುವಂತೆ ಸ್ಪೀಕರ್‌ಗೆ ನಿರ್ದೇಶನ ನೀಡಬೇಕು, ಅನರ್ಹಗೊಳಿಸುವ ಪ್ರಕ್ರಿಯೆಗೆ ಸ್ಪೀಕರ್‌ಗೆ ಅವಕಾಶ ನೀಡಬಾರದು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ಇಪ್ಪತ್ತು ಪುಟಗಳ ಈ ದೂರಿನ ಅರ್ಜಿಯಲ್ಲಿ ಮುಖ್ಯ ಕಾರ್ಯದರ್ಶಿಗಳ ಮೂಲಕ ಕರ್ನಾಟಕ ಸರ್ಕಾರ, ಸ್ಪೀಕರ್‌ ರಮೇಶ್‌ ಕುಮಾರ್‌, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಕೇಂದ್ರದ ಗೃಹ ಸಚಿವಾಲಯವನ್ನು ಪ್ರತಿವಾದಿಗಳನ್ನಾಗಿಸಲಾಗಿದ್ದು, ತಾವು ರಾಜೀನಾಮೆ ನೀಡಲು ಕಾರಣವಾದ ಸಂಗತಿಗಳನ್ನು ಶಾಸಕರು ಉಲ್ಲೇಖಿಸಿದ್ದಾರೆ. ಜತೆಗೆ,

ಅತೃಪ್ತರ ಪರ ಹಿರಿಯ ವಕೀಲ ಮುಕುಲ… ರೋಹಟಗಿ ಅವರು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗಾಯ…, ನ್ಯಾ. ದೀಪಕ್‌ ಗುಪ್ತಾ, ನ್ಯಾ.ಅನಿರುದ್ಧ ಬೋಸ್‌ ಅವರಿದ್ದ ತ್ರಿಸದಸ್ಯ ಪೀಠದ ಮುಂದೆ ತಮ್ಮ ಪ್ರಕರಣದ ತುರ್ತು ವಿಚಾರಣೆ ನಡೆಸುವಂತೆ ನಿವೇದಿಸಿಕೊಂಡಿದ್ದು, ಗುರುವಾರ ವಿಚಾರಣೆ ನಡೆಸಲು ನ್ಯಾಯಪೀಠ ಒಪ್ಪಿಗೆ ಸೂಚಿಸಿದೆ. ಮುಖ್ಯನ್ಯಾಯಮೂರ್ತಿ ರಂಜನ್‌ ಗೊಗಾಯ್‌, ನ್ಯಾ.ದೀಪಕ್‌ ಗುಪ್ತಾ ಮತ್ತು ಅನಿರುದ್ಧ ಬೋಸ್‌ ಅವರನ್ನೊಳಗೊಂಡ ತ್ರೀಸದಸ್ಯ ಪೀಠ ಈ ಅರ್ಜಿ ವಿಚಾರಣೆ ನಡೆಸಲಿದೆ.

ಅತೃಪ್ತರ ದೂರಿನಲ್ಲಿ ಏನಿದೆ?: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರದಲ್ಲಿ ಅಡಳಿತ ಸಂಪೂರ್ಣ ಕುಸಿದಿದೆ. ದುರಾಡಳಿತವೇ ಹೆಚ್ಚಾಗಿದ್ದು, ಐಎಂಎ ವಂಚನೆ, ಜೆಎಸ್‌ಡಬ್ಲ್ಯು ಭೂ ಹಗರಣದಂಥ ಹಲವು ಅಕ್ರಮಗಳು ಈ ಸರ್ಕಾರಾವಧಿಯಲ್ಲಿ ನಡೆದಿವೆ. ನಿರಂತರ ಆಂತರಿಕ ಸಂಘರ್ಷದಿಂದ ಸರ್ಕಾರ ಅಸ್ಥಿರವಾಗಿದೆ. ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳು ಒಟ್ಟಾಗಿ ಚುನಾವಣೆ ಎದುರಿಸಿದರೂ ಹೀನಾಯವಾಗಿ ಸೋಲಾಗಿದೆ.

ಈ ಎಲ್ಲ ಕಾರಣಗಳಿಂದ ಬೇಸತ್ತು ನಾವೆಲ್ಲ ಜು.6ರಂದು ರಾಜೀನಾಮೆ ನೀಡಲು ಹೋಗುತ್ತಿರುವುದು ಗೊತ್ತಾಗುತ್ತಿದ್ದಂತೆ ಸ್ಪೀಕರ್‌ ಖಾಸಗಿ ಕಾರಿನಲ್ಲಿ ಕಚೇರಿಯಿಂದ ಹೊರ ಹೋಗಿದ್ದು ನಂತರ ಸಿಗಲೇ ಇಲ್ಲ. ಹೀಗಾಗಿ ವಿಧಾನಸಭೆ ಕಾರ್ಯದರ್ಶಿಗಳಿಗೆ ಮತ್ತು ರಾಜ್ಯಪಾಲರಿಗೆ ನಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದೇವೆ. ಬಳಿಕ ರಾಜ್ಯಪಾಲರು ಸ್ಪೀಕರ್‌ ಅವರಿಗೆ ನಮ್ಮ ರಾಜೀನಾಮೆ ಪತ್ರಗಳನ್ನು ರವಾನಿಸಿದ್ದಾರೆ. ಇದೇ ವೇಳೆ ಇನ್ನಿಬ್ಬರು ಶಾಸಕರು ಮಂತ್ರಿ ಪದವಿಗೆ ತಮ್ಮ ರಾಜೀನಾಮೆ ಪತ್ರ ಹಾಗೂ ಬಿಜೆಪಿಗೆ ತಮ್ಮ ಬೆಂಬಲ ಪತ್ರವನ್ನು ರಾಜ್ಯಪಾಲರಿಗೆ ನೀಡಿದ್ದಾರೆ. ನಾವು ಸ್ವ ಇಚ್ಛೆಯಿಂದ ಯಾವುದೇ ಭಯಕ್ಕೆ ಒಳಗಾಗದೇ ಸಂವಿಧಾನಬದ್ಧವಾಗಿ ರಾಜೀನಾಮೆ ನೀಡಿದ್ದೇವೆ.

ಜು.9ಕ್ಕೆ ಕಚೇರಿಗೆ ಆಗಮಿಸಿದ ಸ್ಪೀಕರ್‌ ಅವರು ಮಾಧ್ಯಮಗಳ ಮುಂದೆ ಬಂದು, ರಾಜೀನಾಮೆ ಸಲ್ಲಿಸಿದವರಲ್ಲಿ ಎಂಟು ಮಂದಿ ಶಾಸಕರ ರಾಜೀನಾಮೆ ಕ್ರಮಬದ್ಧವಾಗಿಲ್ಲ ಎಂದು ಹೇಳಿ 12ರಂದು ತಮ್ಮ ಮುಂದೆ ಖುದ್ದಾಗಿ ಹಾಜರಾಗುವಂತೆ 5 ಶಾಸಕರಿಗೆ ತಿಳಿಸಿದ್ದಾರೆ. ಇದು ದೂರುದಾರರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವ ಸ್ಪೀಕರ್‌ ಅವರ ಇಂಗಿತವನ್ನು ತೋರಿಸುತ್ತದೆ. ಈ ಮೂಲಕ ಅಲ್ಪಮತಕ್ಕೆ ಕುಸಿದಿರುವ ಸರ್ಕಾರವನ್ನು ಕಾಪಾಡುವ ಉದ್ದೇಶವಿದ್ದಂತಿದೆ.

ನಮ್ಮ ರಾಜೀನಾಮೆ ಪತ್ರ ನಿಗದಿತ ನಮೂನೆಯಲ್ಲಿಲ್ಲವೆಂಬ ಸ್ಪೀಕರ್‌ ಹೇಳಿಕೆ ಕರ್ನಾಟಕ ವಿಧಾನಸಭೆಯ ನಿಯಮಾವಳಿಗಳಿಗೆ ವಿರುದ್ಧವಾಗಿದೆ. ನಮ್ಮ ರಾಜೀನಾಮೆ ಸಂವಿಧಾನದ ನಿಯಮಗಳಿಗೆ ಬದ್ಧವಾಗಿದೆ. ಸ್ಪೀಕರ್‌ ಆ ರೀತಿ ಹೇಳಿರುವುದು ರಾಜೀನಾಮೆ ಪ್ರಕ್ರಿಯೆ ವಿಳಂಬಗೊಳಿಸಿ, ಈಗಾಗಲೇ ರಾಜೀನಾಮೆ ನೀಡಿರುವ ಶಾಸಕರ ಮೇಲೆ ಒತ್ತಡ ಹೇರಲು ಅನುಕೂಲ ಮಾಡಿಕೊಡುವಂತಿದೆ. ನಮ್ಮ ರಾಜೀನಾಮೆಯನ್ನು ಸ್ವೀಕರಿಸದ ಸ್ಪೀಕರ್‌ ನಡೆ ಅತಾರ್ಕಿಕ, ಅಸಹಜ ಮತ್ತು ಸಂವಿಧಾನ ವಿರೋಧಿ. ಮುಖ್ಯಮಂತ್ರಿಗಳು ರಾಜೀನಾಮೆ ನೀಡಬಹುದೆಂಬ ಆತಂಕದಿಂದ ಸ್ಪೀಕರ್‌ ಸರ್ಕಾರದ ಬೆಂಬಲಕ್ಕೆ ನಿಂತಿದ್ದಾರೆ ಎಂದು ಹೇಳಲಾಗಿದೆ.

Follow Us:
Download App:
  • android
  • ios